ಬರ ನಿರ್ವಹಣೆಗೆ ತಾಲೂಕು ಆಡಳಿತದಿಂದ ಅಗತ್ಯ ಕ್ರಮ : ತಹಸೀಲ್ದಾರ್ ಅಶೋಕ್ ಶಿಗ್ಗಾವಿ
ಕುಕನೂರು : ರಾಜ್ಯ ಸರ್ಕಾರ ಈಗಾಗಲೇ ಕುಕನೂರು ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಕೊಳ್ಳಲಾಗಿದೆ ಎಂದು ಕುಕನೂರು ತಹಸೀಲ್ದಾರ್ ಅಶೋಕ್ ಶಿಗ್ಗಾವಿ ಹೇಳಿದ್ದಾರೆ.
ಕುಕನೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರು, ಜಾನುವಾರು ಗಳಿಗೆ ಮೇವು ಸೇರಿದಂತೆ ಬರ ನಿರ್ವಹಣೆಯ ಅಗತ್ಯಕೆಂದು ಸುಮಾರು 52 ಲಕ್ಷ ರೂಪಾಯಿ ಫಂಡ್ ನ್ನು ತೆಗೆದಿರಿಸಲಾಗಿದೆ. ಕುಡಿಯುವ ನೀರಿನ ಕೊರತೆ ಕಂಡು ಬಂದರೆ ರೈತರ ಖಾಸಗಿ ಬೋರ್ ವೆಲ್ ಗಳಿಂದ ನೀರನ್ನು ಪಡೆಯುವ ಬಗ್ಗೆ ಯೋಚನೆ ಇದೆ. ಜಾನುವಾರುಗಳಿಗೆ ಸುಮಾರು 33 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇದೆ.
ಪ್ರತೀ ವಾರವೂ ಪಂಚಾಯತ್ ಮಟ್ಟದಲ್ಲಿ ಬರಗಾಲ ನಿರ್ವಹಣೆ ಸಭೆ ನಡೆಸಲಾಗುತ್ತಿದೆ. ನರೇಗಾದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾನವ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲಾಗಿದೆ. ಶೀಘ್ರದಲ್ಲಿ ನರೇಗಾ ಕೆಲಸ ಆಯಾ ಗ್ರಾಮ ಪಂಚಾಯತ್ ವಾರು ಪ್ರಾರಂಭವಾಗಲಿದೆ ಎಂದು ತಹಸೀಲ್ದಾರ್ ಹೇಳಿದ್ದಾರೆ.
ತಾಲೂಕಿನ 15 ಗ್ರಾಮ ಪಂಚಾಯತ್ ವ್ಯಾಪ್ತಿಯ 57 ಹಳ್ಳಿಗಳಲ್ಲಿ ಜೆ ಜೆ ಎಂ ಕುಡಿಯುವ ನೀರು ಮನೆ ಮನೆಗೆ ತಲುಪುತ್ತಿದೆ, ಕೆಲವೊಂದಷ್ಟು ಕಡೆ ಸಣ್ಣ ಪುಟ್ಟ ತೊಂದರೆ ಇದ್ದು ಅದನ್ನು ಸರಿಪಡಿಸಲಾಗುತ್ತದೆ. ಎಂದರು
ತಾಲೂಕಿನಲ್ಲಿ ನೋಂದಣಿಯಾದ 40 ಸಾವಿರ ಎಫ್ ಐ ಡಿ ಪೈಕಿ ಸುಮಾರು 12 ಸಾವಿರ ರೈತರ ಖಾತೆಗೆ ರಾಜ್ಯ ಸರ್ಕಾರದ ಬರ ಪರಿಹಾರದ ಹಣ ಈಗಾಗಲೇ ಜಮೆಯಾಗಿದೆ.
ಉಳಿದ ರೈತರಿಗೆ ಹಂತ ಹಂತವಾಗಿ ಬರ ಪರಿಹಾರದ ಹಣ ಜಮೆ ಆಗಲಿದೆ ಎಂದು ತಹಸೀಲ್ದಾರ್ ಅಶೋಕ್ ಶಿಗ್ಗಾವಿ ಹೇಳಿದರು.