SPORTS NEWS : ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್‌ನ ಎಂಥಾ ಸೊಬಗಿನ ಆಟ!!
ಪ್ರಜಾ ವೀಕ್ಷಣೆ ಸ್ಪೋರ್ಟ್ ನ್ಯೂಸ್ : ಸೋತೇ ಹೋಯಿತೇನೋ ಎಂಬ ನಿರಾಸೆ ಹುಟ್ಟಿಸಿದ್ದ ಪಂದ್ಯವನ್ನು ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಡ್ರಾ ವರೆಗೆ ತಂದು ಸೊಬಗಿನ ಆಟವಾಡಿ ಪಂದ್ಯವನ್ನು ಡ್ರಾಗ್ ಮಾಡಿದರು.
ಕೆ.ಎಲ್.ರಾಹುಲ್, ಶುಭ್ಮನ್ ಗಿಲ್ ನಿನ್ನೆ ಗೋಡೆಯಂತೆ ನಿಂತರು. ಇಂದು ಬೇಗ ನಿರ್ಗಮಿಸಿದರು. ರಾಹುಲ್ ಶತಕ ವಂಚಿತನಾದದ್ದು ಬೇಸರ ಮೂಡಿಸಿತ್ತು. ಜಡೇಜಾ- ವಾಷಿಂಗ್ಟನ್ ಸುಂದರ್ ಕದಲದೆ ನಿಲ್ಲುತ್ತಾರೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಒಂದರ ಮೇಲೊಂದರಂತೆ ವಿಕೆಟ್ ಉರುಳುತ್ತದೆ ಎಂದೇ ಭಾವಿಸಿ ನಿರಾಸೆ ಮೂಡಿತ್ತು. ಅದು ಇಂಗ್ಲೆಂಡ್ ಕಂಡ ಕನಸು ಕೂಡ ಆಗಿತ್ತು.
ಸುಂದರ್ ಒಂದು ಫೋರ್ ಹಾಗೂ ಒಂದು ಸಿಕ್ಸರ್ ನೊಂದಿಗೆ ಅರ್ಧಶತಕ ಪೂರೈಸಿದ ರೀತಿ, ಎಂಬತ್ತರಿಂದ ತೊಂಬತ್ತರ ಗಡಿ ದಾಟಲು ಹ್ಯಾಟ್ರಿಕ್ ಫೋರ್ ಬಾರಿಸಿದ್ದು, ಜಡೇಜಾ ಸಿಕ್ಸರ್ ನೊಂದಿಗೆ ಶತಕ ಪೂರೈಸಿದ್ದು ಇಂಗ್ಲೆಂಡ್ ನ ಮನೋಬಲದ ಮೇಲೆ ಕೊಟ್ಟ ಬಲವಾದ ಹೊಡೆತಗಳು ಅನಿಸಿತು. ಬೆನ್ ಸ್ಟೋಕ್ಸ್ ಎಷ್ಟೇ ಕಾದಾಡಿದರೂ ಈ ಜೋಡಿಯನ್ನು ಮುರಿಯಲು ಆಗಲೇ ಇಲ್ಲ. ಟೆಸ್ಟ್ ನ ಸೊಬಗು ಹೆಚ್ಚಿಸಿದ ರಾಹುಲ್, ಗಿಲ್, ಜಡೇಜಾ, ಸುಂದರ್ ಅಭಿನಂದನೆಗೆ ಅರ್ಹರು.
ಜವಾಬ್ದಾರಿ ಎನ್ನುವುದು ಜಡೇಜಾರನ್ನೇ ಹುಡುಕಿಕೊಂಡು ಹೋಯಿತೇನೋ ಎನ್ನುವಂತೆ ಜಡೇಜಾ ಎರಡೂ ಪಂದ್ಯಗಳಲ್ಲಿ ಪಟ್ಟು ಬಿಡದೆ ಆಡಿದ್ದು ಖುಷಿ ಕೊಟ್ಟಿತು. ಸರಣಿಯ ನಾಲ್ಕೂ ಪಂದ್ಯಗಳಲ್ಲಿ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ನನಗೆ ಇಷ್ಟವಾದ ಇಬ್ಬರು ಇಂಗ್ಲೆಂಡ್ ಆಟಗಾರರು. ಸ್ಟೋಕ್ಸ್ ಕಳೆದ ಒಂದು ಪಂದ್ಯದಲ್ಲಿ ರಾಹುಲ್ ನನ್ನು ಔಟ್ ಮಾಡುವ ಅವಕಾಶವಿದ್ದರೂ ಪಂತ್ ನನ್ನು ಏಕೆ ಔಟ್ ಮಾಡಿದೆ ಎನ್ನುವುದಕ್ಕೆ ಒಂದು ಮಾತು ಹೇಳಿದ್ದ. ಆ ಮಾತಿನಲ್ಲಿ ರಾಹುಲ್ ನಮ್ಮನ್ನು ಕಾಡಬಹುದಾದ ಆಟಗಾರನೇ ಅಲ್ಲ ಎಂಬ ಅರ್ಥವಿತ್ತು. ಆದ್ರೆ ನಿನ್ನೆಯ ರಾಹುಲ್ ಆಟ, ಬೆನ್ ಸ್ಟೋಕ್ ಗೆ ಕೃತಿಯ ಮೂಲಕ ಕೊಟ್ಟ ತಕ್ಕ ಉತ್ತರದಂತೆ ಕಾಣಿಸಿತ್ತು.
ಆದರೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಸ್ಟೋಕ್ ಭಾರತ ತಂಡವನ್ನು ಕಾಡಿದ್ದಂತೂ ನಿಜ. ಜೋ ರೂಟ್ ತಣ್ಣಗೆ ಆಡುತ್ತ ಶತಕದ ಗುರಿ ತಲುಪುವುದೇ ಗೊತ್ತಾಗುವುದಿಲ್ಲ. ಎಲ್ಲ ವಿಕೆಟ್ ಗಳು ಉರುಳುವಾಗಲೂ ಬೇರೂರಿ ನಿಲ್ಲುವ ರೂಟ್ ನ ರೂಟೇ ಬೇರೆ ಎಂಬಂತೆ ಭಾಸವಾಗುತ್ತದೆ. ಏನೇ ಇರಲಿ, ರೂಟ್ ಹಾಗೂ ಸ್ಟೋಕ್ಸ್ ಭಾರತ ತಂಡ ಮರೆಯಬಾರದ ಎರಡು ಹೆಸರುಗಳೇ ಹೌದು.