“ಖಾದಿ ಉತ್ಸವ-2025ರ ರಾಜ್ಯ ಮಟ್ಟದ ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶಾಸಕ ಬಸವನಗೌಡ ತುರುವಿಹಾಳ ಅವರು ಚಾಲನೆ”
ಕೊಪ್ಪಳ : ಖಾದಿ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಪ್ರತಿ ವರ್ಷ ಖಾದಿ ಬಟ್ಟೆಗಳಿಗೆ ಶೇ.35 ರಷ್ಟು ಹಾಗೂ ರೇಷ್ಮೆ ಖಾದಿ ಬಟ್ಟೆಗಳಿಗೆ ಶೇ.25 ರಷ್ಟು ರಿಯಾಯಿತಿಯನ್ನು ನೀಡುತ್ತಿದ್ದು, ಇದರಿಂದ ಖಾದಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಹಾಗೂ ಮಸ್ಕಿ ಶಾಸಕರಾದ ಬಸವನಗೌಡ ತುರುವಿಹಾಳ ಹೇಳಿದರು.
ಅವರು ಭಾನುವಾರ ಕೊಪ್ಪಳ ನಗರದ ಮುಸ್ಲಿಂ ಶಾದಿಮಹಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 24 ರಿಂದ ಸಪ್ಟೆಂಬರ್ 2ರ ವರೆಗೆ ಹಮ್ಮಿಕೊಳ್ಳಲಾದ ಖಾದಿ ಉತ್ಸವ-2025ರ ರಾಜ್ಯ ಮಟ್ಟದ ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿ, ನಂತರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಖಾದಿ ಉತ್ಪಾದನೆಗೆ ಒಂದು ಪ್ರಮುಖ ಇತಿಹಾಸವಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವದೇಶಿ ಚಳುವಳಿಯ ಪ್ರತೀಕವಾಗಿ ಖಾದಿ ಪ್ರತಿನಿಧಿಸುತ್ತದೆ ಎಂದರೆ ತಪ್ಪಿಲ್ಲ. ಖಾದಿ ಕೇವಲ ಬಟ್ಟೆ ಮಾತ್ರವಲ್ಲ ಅದು ನಮ್ಮ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಪರಿಸರ ಜೀವನ ಶೈಲಿಯ ಪ್ರತೀಕಕವು ಹೌದು. ಖಾದಿ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಪುನರ್ಜೀನಗೊಳಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು 1957 ರಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯನ್ನು ಸ್ಥಾಪಿಸಿರುತ್ತದೆ. ಖಾದಿ ಮಂಡಳಿಯ ಕಳೆದ 65 ವರ್ಷಗಳಿಗೂ ಮೇಲ್ಪಟ್ಟು ಖಾದಿ ಕ್ಷೇತ್ರವಾದ ಹತ್ತಿ, ರೇಷ್ಮೆ ಹಾಗೂ ಉಣ್ಣೆ ನೂಲಿನಿಂದ ಕೈ ಚರಕದ ಮೂಲಕ ನೂಲು ತೆಗೆದು ಸ್ಥಳೀಯ ಕಸುಬುದಾರರಿಂದಲೇ ಹತ್ತಿ ಬಟ್ಟೆ ಹಾಗೂ ಉಣ್ಣೆ ವಸ್ತ್ರಗಳನ್ನು ತಯಾರಿಸಲು ಉತ್ತೇಜಿಸುತ್ತಾ ಬಂದಿರುವುದರಿಂದ ಪ್ರಸ್ತುತ ಕರ್ನಾಟಕದಲ್ಲಿ 175 ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಖಾದಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರವುದು ಪುಷ್ಠೀಕರಿಸುತ್ತದೆ ಎಂದರು.
ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ರೂ.1.70 ಲಕ್ಷ ಕೋಟಿಗಗೂ ಹೆಚ್ಚು ವಹಿವಾಟು ನಡೆದಿರುವುದರ ಜೊತೆಗೆ ಸುಮಾರು 1.94 ಕೋಟಿ ಉದ್ಯೋಗಾವಕಾಶವನ್ನು ಸೃಷ್ಠಿರುವುದು ಹೆಮ್ಮೆಯ ವಿಷಯ. ಅದೇ ರೀತಿ ಕರ್ನಾಟಕದಲ್ಲಿ ರೂ. 650 ಕೋಟಿಗೂ ಮಿಗಿಲಾದ ವಹಿವಾಟಿನೊಂದಿಗೆ 21,000 ಕ್ಕೂ ಹೆಚ್ಚು ಉದ್ಯೋಗಳನ್ನು ಸೃಷ್ಟಿಸಿರುವುದು ಹೆಮ್ಮೆಯ ವಿಷಯವಾಗಿರುತ್ತದೆ. ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಭಾಗವಾಗಿ ಇಂದು ಕೊಪ್ಪಳ ಜಿಲ್ಲೆಯಲ್ಲಿ “ಖಾದಿ ಉತ್ಸವ -2025” ಹೆಸರಿನಲ್ಲಿ ಖಾದಿ ವಸ್ತು ಪ್ರದರ್ಶನ ಮಾರಾಟ ಮೇಳವನ್ನು ಉದ್ಘಾಟಿಸಲು ಹೆಮ್ಮೆ ಎನಿಸುತ್ತಿದೆ. ಮುಂದಿನ 3 ರಿಂದ 4 ತಿಂಗಳೊಳಗೆ ರಾಜ್ಯದ ಇನ್ನೂ ವಿವಿಧ 6 ಜಿಲ್ಲೆಗಳಲ್ಲಿ ಖಾದಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗುವುದು. ಕೊಪ್ಪಳ ನಗರದ ಶಾದಿಮಹಲ್‌ನಲ್ಲಿ ಇಂದಿನಿಂದ 10 ದಿನಗಳ ಕಾಲ ನಡೆಯುವ ಈ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ವಿವಿಧ ರಾಜ್ಯಗಳಿಂದಲೂ ಪ್ರದರ್ಶಕರು ಬಂದು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದರು.
ರಾ.ಬ.ಕೊ.ವಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಪ್ಪಳ ಶಾಸಕರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಕೊಪ್ಪಳದಲ್ಲಿ ಆಯೋಜನೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ಬಸನಗೌಡ ತುರುವಿಹಾಳ ಅವರು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾದ ಬಳಿಕ ಅನೇಕ ಕಡೆಗಳಲ್ಲಿ ಈ ರೀತಿ ವಸ್ತು ಪ್ರದರ್ಶನಗಳನ್ನು ಮಾಡುತ್ತಾ ಬಂದಿದ್ದಾರೆ. ಯಾರು ಇವತ್ತಿನವರೆಗೂ ಕೈಯಲ್ಲಿ ಬಟ್ಟೆಗಳನ್ನು ನೇಯ್ದು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಅವರಿಗೆ ಈ ಇಲಾಖೆ ಪ್ರೋತ್ಸಾಹ ಕೊಡಬೇಕು. ನಮ್ಮ ಕೊಪ್ಪಳದ ಭಾಗ್ಯನಗರ ಮತ್ತು ಕಿನ್ನಾಳನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೈ ಮಗ್ಗದಿಂದ ಬಟ್ಟೆಗಳನ್ನು ನೇಯುಯವಂತ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಖಾದಿ ಎಂಬುದು ನಮ್ಮ ದೇಶಿಯ ಉಡುಪು. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವೋಕಲ್ ಫಾರ್ ಲೋಕಲ್ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶೀಯ ವಸ್ತುಗಳಿಗೆ ನಾವು ಪ್ರಾತಿನ್ಯತೆ ಕೊಡಬೇಕು ಹಾಗೂ ವಿಶೇಷವಾಗಿ ಹತ್ತಿಯಿಂದ ಉತ್ಪಾದನೆ ಮಾಡುವ ಎಲ್ಲಾ ವಸ್ತುಗಳಿಗೆ ಉತ್ತೇನ ನೀಡಬೇಕೆಂದು ಕರೆ ನೀಡಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕಾರ್ಯನಿರ್ವಾಹಣಾಧಿಕಾರಿ ಡಿ.ಬಿ. ನಟೇಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ರಾಮಣ್ಣ ನಾಯಕ, ಕೊಪ್ಪಳ ನಗರಸಭೆ ಸದಸ್ಯರಾದ ಅಕ್ಬರ್ ಪಾಶಾ ಪಲ್ಟನ್, ಮಾಜಿ ಜಿ.ಪಂ ಸದಸ್ಯರಾದ ಪ್ರಸನ್ನ ಗಡಾದ, ಕ.ರಾ.ಖಾ&ಗ್ರಾ. ಮಂಡಳಿಯ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ.ವೀರೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕ.ರಾ.ಖಾ&ಗ್ರಾ. ಮಂಡಳಿಯ ಧಾರವಾಡ ಜಿಲ್ಲಾ ಅಭಿವೃದ್ಧಿ ಅಧಿಕಾರಿ ನಾಗನಗೌಡ ನೆಗಳೂರು ಅವರು ಕಾರ್ಯಕ್ರಮ ನಿರೂಪಿಸಿದರು.