PV NEWS : ಕುಕನೂರು | “ಪ್ರಜಾಸೌಧ” ಭೂ ವಿವಾದಕ್ಕೆ ಹೊಸ ತಿರುವು! : “ವಿವಾದಿತ ಜಾಗದಲ್ಲಿ ಭೂಮಿ ಪೂಜೆ ಕಾನೂನುಬಾಹಿರ” – ಮಠದ ಶ್ರೀಗಳ ಆಕ್ರೋಶ

PV NEWS ಕನ್ನಡ 24×7 :
ಕುಕನೂರು, ಜು. 18 (PV NEWS): ಕುಕನೂರು ಪಟ್ಟಣದ ಸರ್ವೇ ನಂ. 78ರ 16 ಎಕರೆ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದ ಬೆನ್ನಲ್ಲೇ, ಆ ಜಾಗಕ್ಕೆ ಸಂಬಂಧಿಸಿದ ಭೂವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ವಿವಾದಿತ ಭೂಮಿಯಲ್ಲಿ ಭೂಮಿ ಪೂಜೆ ನಡೆಸಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ಗುದ್ನೇಪ್ಪನ ಮಠದ ನೀಲಗುಂದದ ಶ್ರೀ ಪ್ರಭುಲಿಂಗ ದೇವರು ಆರೋಪಿಸಿದರು.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿದೆ ಎನ್ನಲಾದ ಹಾಗೂ ಗುದ್ನೇಶ್ವರ ಸ್ವಾಮಿ ಮಠದ ಹಕ್ಕು ಹೊಂದಿದೆ ಎಂದು ಹೇಳಲಾಗುತ್ತಿರುವ ಭೂಮಿಯ ಕುರಿತು ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಇಂತಹ ಸಂದರ್ಭದಲ್ಲಿ ವಿವಾದಿತ ಜಾಗದಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿರುವುದು ಕಾನೂನುಬಾಹಿರ ಕ್ರಮ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನ್ಯಾಯಾಲಯದ ಮೊದಲ ಆದೇಶದಲ್ಲಿ ಸೇವಾದಾರರ ಸಾಗುವಳಿ ಭೂಮಿಯನ್ನು ಹೊರತುಪಡಿಸಿ ಬೇರೆ ಪ್ರದೇಶದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಬಹುದು ಎಂದು ಮಾತ್ರ ಉಲ್ಲೇಖಿಸಲಾಗಿದೆ. ಆದರೆ ವಿವಾದಿತ ಜಾಗದಲ್ಲೇ ಪ್ರಜಾಸೌಧ ನಿರ್ಮಿಸಲು ಯಾವುದೇ ಅನುಮತಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸೇವಾದಾರರ ಸಾಗುವಳಿ ಭೂಮಿಯನ್ನು ಅವರಿಗೆ ಹಿಂದಿರುಗಿಸುವಂತೆ ಕೋರಿ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಲಾಗಿದ್ದು, ಅದರ ವಿಚಾರಣೆ ಬಾಕಿಯಿದೆ. ಅಂತಿಮ ಆದೇಶ ಬರುವವರೆಗೆ ವಿವಾದಿತ ಜಾಗದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ಅವರು ಒತ್ತಾಯಿಸಿದರು.
“ಮಠದ ಆಸ್ತಿ ಡಸ್ಟ್‌ಬಿನ್ ಅಲ್ಲ”

“ಗುದ್ನೇಶ್ವರ ಸ್ವಾಮಿ ಮಠದ ಆಸ್ತಿ ಯಾರಿಗೆ ಬೇಕಾದರೂ ಬಳಸಿಕೊಳ್ಳುವ ಡಸ್ಟ್‌ಬಿನ್ ಅಲ್ಲ. ಈಗಾಗಲೇ ಭೂಮಿ ಪೂಜೆ ನಡೆಸಿರುವ ಸರ್ವೇ ನಂ. 78ರ 16 ಎಕರೆ ಜಾಗಕ್ಕೆ ಸಂಬಂಧಿಸಿದ ಚೆಕ್‌ಬಂದಿ ನಕಾಶೆಯೇ ಇಲ್ಲ. ಕಳೆದ ಎರಡು ವರ್ಷಗಳಿಂದ ಸೇವಾದಾರರನ್ನು ತೊಂದರೆಗೆ ಸಿಲುಕಿಸಿ ಮಠದ ಭೂಮಿಯನ್ನು ಪಡೆದುಕೊಳ್ಳುವ ಹುನ್ನಾರ ನಡೆಯುತ್ತಿದೆ” ಎಂದು ಶ್ರೀಗಳು ಗಂಭೀರ ಆರೋಪ ಮಾಡಿದರು.
40 ಎಕರೆ ಭೂಮಿಯಲ್ಲಿ ಸೇವಾದಾರರ ಜೀವನೋಪಾಯ!
ಮಠದ ಉತ್ತರ ಭಾಗದಲ್ಲಿರುವ ಸುಮಾರು 40 ಎಕರೆ ಫಲವತ್ತಾದ ಸಾಗುವಳಿ ಭೂಮಿಯನ್ನು 18 ಮಂದಿ ಸೇವಾದಾರರು ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಭೂಮಿಯ ಹಕ್ಕಿನ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಸೇವಾದಾರರಿಗೆ ಕಾನೂನುಬದ್ಧವಾಗಿ ಭೂಮಿಯನ್ನು ಹಂಚಿಕೆ ಮಾಡಿಕೊಡಬೇಕು. ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ಅವರು ಆಗ್ರಹಿಸಿದರು.

“ಸರ್ಕಾರ ಭೂಮಿ ಖರೀದಿಸಲಿ, ಮಠದ ಆಸ್ತಿಗೆ ಕೈಹಾಕಬೇಡಿ”
ಬ್ರಿಟಿಷರ ಆಡಳಿತದ ಕಾಲದಲ್ಲಿಯೂ ಮಠದ ಆಸ್ತಿಗೆ ಧಕ್ಕೆಯಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮಠದ ಭೂಮಿಯ ಮೇಲೆ ಕಣ್ಣು ಹಾಕಿ ಪರಭಾರೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದು ಸರ್ಕಾರದ ಜಮೀನಲ್ಲ; ಶತಮಾನಗಳಿಂದ ಮಠಕ್ಕೆ ದಾನವಾಗಿ ಬಂದ ಧಾರ್ಮಿಕ ಆಸ್ತಿಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿದ್ದರೆ ಸರ್ಕಾರ ಕಾನೂನುಬದ್ಧವಾಗಿ ರೈತರ ಭೂಮಿಯನ್ನು ಖರೀದಿಸಬೇಕು. ಮಠದ ಆಸ್ತಿಯನ್ನೇ ಗುರಿಯಾಗಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
