You are currently viewing PV NEWS : ಕುಷ್ಟಗಿಯನ್ನು ಭೀಕರ ಬರ ತಾಲೂಕು ಎಂದು ಘೋಷಿಸಲು ಆಗ್ರಹ!

PV NEWS : ಕುಷ್ಟಗಿಯನ್ನು ಭೀಕರ ಬರ ತಾಲೂಕು ಎಂದು ಘೋಷಿಸಲು ಆಗ್ರಹ!

PV NEWS : ಕುಷ್ಟಗಿಯನ್ನು ಭೀಕರ ಬರ ತಾಲೂಕು ಎಂದು ಘೋಷಿಸಲು ಆಗ್ರಹ!

PV NEWS ಕನ್ನಡ 24×7| 

ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯ; ರೈತ ಸಂಘದ ನೇತೃತ್ವದಲ್ಲಿ ಹನುಮಸಾಗರ ಬಂದ್

ಹನುಮಸಾಗರ, ಸೆ 08 : ಕುಷ್ಟಗಿ ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ತಾಲೂಕನ್ನು ಭೀಕರ ಬರಪೀಡಿತ ಪ್ರದೇಶವೆಂದು ತಕ್ಷಣ ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಕಡೇಕೊಪ್ಪ ಸೇರಿದಂತೆ ಕೆರೆ ತುಂಬಿಸುವ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ಹನುಮಸಾಗರ ಪಟ್ಟಣ ಬಂದ್ ನಡೆಸಲಾಯಿತು.

ರೈತರ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಟ್ಟಣದ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ಸಾರ್ವಜನಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದವು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಭೀಕರ ಬರ ಪರಿಸ್ಥಿತಿ ಉಂಟಾಗಿದೆ. ರೈತರು ಸಾಲ-ಶೂಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ಮಳೆ ಕೈಕೊಟ್ಟ ಪರಿಣಾಮ ಸಂಪೂರ್ಣ ಹಾನಿಗೊಳಗಾಗಿವೆ. ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆಯೂ ಎದುರಾಗುವ ಆತಂಕವಿದೆ. ಸರ್ಕಾರ ಕೂಡಲೇ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ನೆರವು ನೀಡಬೇಕು. ರೈತರ ಸಮಸ್ಯೆಯಲ್ಲಿ ರಾಜಕೀಯ ಮಾಡದೆ ಕುಷ್ಟಗಿ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ನಜೀರಸಾಬ ಮೂಲಿಮನಿ ಮಾತನಾಡಿ, ಕಡೇಕೊಪ್ಪ ಸೇರಿದಂತೆ ಕೆರೆ ತುಂಬಿಸುವ ಯೋಜನೆಗೆ 2019–20ನೇ ಸಾಲಿನಲ್ಲಿ ₹498 ಕೋಟಿ ಅನುದಾನ ಮಂಜೂರಾಗಿದ್ದರೂ, ಆರು ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಣ್ಣಪುಟ್ಟ ಕಾಮಗಾರಿಗಳ ನೆಪದಲ್ಲಿ ಯೋಜನೆ ವಿಳಂಬವಾಗುತ್ತಿದ್ದು, ಇದರಿಂದ ರೈತರಿಗೆ ಯೋಜನೆಯ ಪ್ರಯೋಜನ ದೊರೆಯುತ್ತಿಲ್ಲ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಗೆ ವೇಗ ನೀಡುವ ಮೂಲಕ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ರೈತರ ಬದುಕಿಗೆ ನೀರಾವರಿ ಯೋಜನೆಗಳು ಅತ್ಯಂತ ಅಗತ್ಯವಾಗಿದ್ದು, ಪಕ್ಷಭೇದ ಮರೆತು ರೈತರ ಹಿತಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಮಹಾಂತೇಶ ಅಗಸಿಮುಂದಿನ, ಆರ್.ಕೆ. ದೇಸಾಯಿ, ಸೂಚೆಪ್ಪ ಬೋವಿ, ಶಿವಪುತ್ರಪ್ಪ ಕೋಳೂರು, ಬಸವರಾಜ ಬಾಚಲಾಪುರ, ಬಸವರಾಜ ದ್ಯಾವಣ್ಣವರ, ಯಮನೂರ ಮಡಿವಾಳರ, ಕಾಡಪ್ಪ ಮಡಿಕೇರಿ, ಮಲ್ಲಿಕಾರ್ಜುನ ದೋಟಿಹಾಳ, ಹನಮೇಶ ಶಾಕಾಪುರ, ಸಂಗಮ್ಮ ಗುಳೇಗೌಡ್ರ, ಮಹಾಂತೇಶ ಕುಷ್ಟಗಿ, ಈಶಪ್ಪ ಕಣ್ಣೂರ, ಸಗರಪ್ಪ ಕುಂಬಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

ಮುಖ್ಯ ಬೇಡಿಕೆಗಳು:

ಕುಷ್ಟಗಿ ತಾಲೂಕನ್ನು ಭೀಕರ ಬರಪೀಡಿತ ತಾಲೂಕು ಎಂದು ಘೋಷಿಸಬೇಕು.

– ಬರದಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.

– ಕಡೇಕೊಪ್ಪ ಸೇರಿದಂತೆ ಕೆರೆ ತುಂಬಿಸುವ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು.

– ವಿಳಂಬವಾಗುತ್ತಿರುವ ಕಾಮಗಾರಿಗಳಿಗೆ ವೇಗ ನೀಡಬೇಕು.

– ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು.

ವರದಿ : ನಿಂಗಪ್ಪ ಜಿಗೇರಿ ಕುಷ್ಟಗಿ.

Prajavikshane

Chandru R Bhanapaur

Leave a Reply

error: Content is protected !!