PV NEWS : ಶಕ್ತಿ’ ಯೋಜನೆ ಮಾತಿಗೆ ರಾಜಕೀಯ ತಿರುವು; ಸಚಿವ ರಾಯರೆಡ್ಡಿ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ!
ಉಚಿತ ಬಸ್ ಪ್ರಯಾಣದ ವೇದಿಕೆಯಲ್ಲಿ ರಾಜಕೀಯ ಮಾತು; ರಾಯರೆಡ್ಡಿ ಹೇಳಿಕೆ ವೈರಲ್ ಚರ್ಚೆಗೆ?
PV NEWS ಕನ್ನಡ 24×7 :
ಕುಕನೂರು, ಸೆ.14: ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯು ಯಾವುದೇ ಜಾತಿ, ಧರ್ಮ, ಆದಾಯ ಅಥವಾ ರಾಜಕೀಯ ಪಕ್ಷದ ಭೇದವಿಲ್ಲದೆ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣದ ಸೌಲಭ್ಯ ಒದಗಿಸುತ್ತಿದೆ ಎಂದು ಶಾಸಕ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಕುಕನೂರು ತಾಲೂಕಿನ ಮಂಡಲಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜನಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆಯ ವ್ಯಾಪ್ತಿಯನ್ನು ವಿವರಿಸುವ ಸಂದರ್ಭದಲ್ಲಿ ರಾಜಕೀಯ ನಾಯಕರ ಕುಟುಂಬದವರನ್ನೂ ಉಲ್ಲೇಖಿಸಿದರು.
“ನನ್ನ ಪತ್ನಿ, ಮಗಳು ಉಚಿತವಾಗಿ ಪ್ರಯಾಣಿಸಬಹುದಾದರೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ, ಬಿಜೆಪಿ ಮುಖಂಡ ಹಾಲಪ್ಪ ಆಚಾರ್ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಮಾರುತಿ ಅವರ ಕುಟುಂಬದ ಹೆಣ್ಣುಮಕ್ಕಳೂ ಈ ಸೌಲಭ್ಯ ಪಡೆಯಬಹುದು” ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.
ಶಕ್ತಿ ಯೋಜನೆಯಲ್ಲಿ ಯಾವುದೇ ಪಕ್ಷಪಾತವಿಲ್ಲ. ರಾಜ್ಯದ ಎಲ್ಲ ಮಹಿಳೆಯರಿಗೂ ಸಮಾನವಾಗಿ ಸೌಲಭ್ಯ ದೊರೆಯುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಯೋಜನೆಯಡಿ ಕೋಟ್ಯಂತರ ಮಹಿಳಾ ಪ್ರಯಾಣಗಳು ನಡೆದಿವೆ ಎಂದು ಸಚಿವರು ತಿಳಿಸಿದರು.
ಬಿಜೆಪಿ ಆಕ್ಷೇಪ..!
ಸಚಿವರು ಶಕ್ತಿ ಯೋಜನೆಯ ಕುರಿತು ಮಾತನಾಡುವ ವೇಳೆ ರಾಜಕೀಯ ನಾಯಕರ ಹಾಗೂ ಗೌರವಾನ್ವಿತ ವ್ಯಕ್ತಿಗಳ ಕುಟುಂಬದವರ ಹೆಸರನ್ನು ಉಲ್ಲೇಖಿಸಿರುವುದಕ್ಕೆ ಬಿಜೆಪಿ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಸರ್ಕಾರಿ ಯೋಜನೆಯ ಕುರಿತು ವಿವರಣೆ ನೀಡುವ ಸಂದರ್ಭದಲ್ಲಿ ಈ ರೀತಿಯ ರಾಜಕೀಯ ಉಲ್ಲೇಖ ಅಗತ್ಯವಿತ್ತೇ ಎಂಬ ಪ್ರಶ್ನೆಯನ್ನೂ ಬಿಜೆಪಿ ಮುಖಂಡರು ಎತ್ತಿದ್ದಾರೆ. ಸಚಿವರ ಹೇಳಿಕೆ ಸಾಂದರ್ಭಿಕ ಹಾಗೂ ಹಾಸ್ಯಮಿಶ್ರಿತವಾಗಿತ್ತೇ ಅಥವಾ ರಾಜಕೀಯ ಉದ್ದೇಶ ಹೊಂದಿತ್ತೇ ಎಂಬ ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ಆರಂಭವಾಗಿದೆ.