PV NEWS : “ರೈತರು ಬರದಲ್ಲಿ… ಸರ್ಕಾರ ಪಾದಯಾತ್ರೆಯಲ್ಲಿ!” : ಬರಪೀಡಿತ ತಾಲೂಕುಗಳಿಗೆ ತಲಾ ₹5 ಕೋಟಿ ಬಿಡುಗಡೆಗೆ ಕೋನನಗೌಡ್ರು ಆಗ್ರಹ!
ರೈತರ ನೆರವಿಗೆ ತುರ್ತು ಕ್ರಮ ಕೈಗೊಳ್ಳಬೇಕು; ಬರಪೀಡಿತ ತಾಲೂಕುಗಳಿಗೆ ₹5 ಕೋಟಿ ಬಿಡುಗಡೆಗೆ ಆಗ್ರಹ!
ಯಲಬುರ್ಗಾ, ಸೆ. 30 : ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ರೈತರು, ಜನರು ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಅಗತ್ಯ ಕ್ರಮ ಕೈಗೊಳ್ಳುವ ಬದಲು ‘ಭಾರತ್ ಜೋಡೋ’ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಎಸ್. ಕೋನನಗೌಡ್ರು ಆರೋಪಿಸಿದರು.
ಯಲಬುರ್ಗಾದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬರಪೀಡಿತ ತಾಲೂಕುಗಳಿಗೆ ಸರ್ಕಾರ ತಲಾ ₹1 ಕೋಟಿ ನೀಡುವುದಾಗಿ ಘೋಷಿಸಿದ್ದರೂ, ಇದುವರೆಗೆ ತಾಲೂಕು ಆಡಳಿತಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ದೂರಿದರು. ಇದರಿಂದ ಸರ್ಕಾರಕ್ಕೆ ರೈತರ ಸಮಸ್ಯೆಗಳ ಬಗ್ಗೆ ಇರುವ ಕಾಳಜಿ ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದರು.
ಬರದ ತೀವ್ರತೆಯಿಂದ ಜನರು ಹಾಗೂ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಜಾನುವಾರುಗಳಿಗೆ ಅಗತ್ಯ ಮೇವು ಒದಗಿಸಲು ಮೇವು ಬ್ಯಾಂಕ್‌ಗಳನ್ನು ತೆರೆಯುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಮಲ್ಲನಗೌಡ ಆರೋಪಿಸಿದರು. ರಾಜ್ಯದ ರೈತರು ಸರ್ಕಾರದ ಮೇಲಿನ ಭರವಸೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ರಾಜ್ಯದ 177 ಬರಪೀಡಿತ ತಾಲೂಕುಗಳಲ್ಲಿನ ರೈತರಿಗೆ ಸರ್ಕಾರ ಘೋಷಿಸಿರುವ ₹2,500ರ ಅಲ್ಪಾವಧಿ ಪರಿಹಾರ ಮೊತ್ತ ಸಮರ್ಪಕವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ರೈತರ ಸಂಕಷ್ಟಕ್ಕೆ ತಕ್ಕಂತೆ ಸಮಗ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿ ವಿಚಾರಕ್ಕೂ ಕೇಂದ್ರ ಸರ್ಕಾರವನ್ನು ಹೊಣೆ ಮಾಡುವುದು ಬಿಟ್ಟು ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಲಾಗಿತ್ತು ಎಂದು ಉಲ್ಲೇಖಿಸಿದ ಅವರು, ಅದೇ ರೀತಿಯಲ್ಲಿ ರಾಜ್ಯ ಸರ್ಕಾರವೂ ರೈತರ ಸಾಲಮನ್ನಾ ಮಾಡುವ ಮೂಲಕ ರೈತರ ಪರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಬರಪೀಡಿತ ತಾಲೂಕುಗಳಲ್ಲಿ ತುರ್ತು ಬರ ನಿರ್ವಹಣಾ ಕಾರ್ಯಗಳಿಗೆ ತಲಾ ₹5 ಕೋಟಿ ಬಿಡುಗಡೆ ಮಾಡಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ರೈತರಿಗೆ ಅಗತ್ಯ ಪರಿಹಾರ ಒದಗಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಲ್ಲನಗೌಡ ಎಸ್. ಕೋನನಗೌಡ್ರು ಆಗ್ರಹಿಸಿದರು.