You are currently viewing PV NEWS : ಕೊಪ್ಪಳ | ಯುವಜನರ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಶರಣು ಪಾಟೀಲ್

PV NEWS : ಕೊಪ್ಪಳ | ಯುವಜನರ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಶರಣು ಪಾಟೀಲ್

PV NEWS : ಕೊಪ್ಪಳ | ಯುವಜನರ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಶರಣು ಪಾಟೀಲ್

ನ.27ರಿಂದ 29ರವರೆಗೆ ಜೈಪುರದಲ್ಲಿ ಎಐಡಿವೈಒ ನಾಲ್ಕನೇ ಅಖಿಲ ಭಾರತ ಯುವಜನ ಸಮ್ಮೇಳನ

PV NEWS ಕನ್ನಡ 24×7

ಕೊಪ್ಪಳ, ನ.13: ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅಕ್ರಮಗಳು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಜಾತಿವಾದ, ಕೋಮುವಾದ ಹಾಗೂ ಆನ್‌ಲೈನ್ ಬೆಟ್ಟಿಂಗ್, ಮದ್ಯ ಮತ್ತು ಮಾದಕ ವಸ್ತುಗಳ ಹಾವಳಿಯಂತಹ ಗಂಭೀರ ಸಮಸ್ಯೆಗಳ ವಿರುದ್ಧ ಯುವಜನರು ಸಂಘಟಿತರಾಗಿ ಹೋರಾಟ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಎಐಡಿವೈಒ ಜಿಲ್ಲಾ ಸಮಿತಿ ಕಾರ್ಯದರ್ಶಿ ಶರಣು ಪಾಟೀಲ್ ಹೇಳಿದರು.

ರಾಜಸ್ಥಾನದ ಜೈಪುರದಲ್ಲಿ ನವೆಂಬರ್ 27, 28 ಮತ್ತು 29ರಂದು ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ)ಯ ನಾಲ್ಕನೇ ಅಖಿಲ ಭಾರತ ಯುವಜನ ಸಮ್ಮೇಳನದ ಪೋಸ್ಟರ್‌ನ್ನು ಶುಕ್ರವಾರ ಕೊಪ್ಪಳದ ಸಂಘಟನೆಯ ಜಿಲ್ಲಾ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಸಮರ್ಪಕವಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಅಪರೂಪಕ್ಕೆ ನಡೆಯುವ ನೇಮಕಾತಿಗಳಲ್ಲಿಯೂ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಭ್ರಷ್ಟಾಚಾರದ ಕಾರಣದಿಂದ ಸ್ಪರ್ಧಾತ್ಮಕ ಪರೀಕ್ಷೆಗಳು ರದ್ದಾಗುತ್ತಿವೆ. ಇದರಿಂದ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಯುವಜನರ ಭವಿಷ್ಯ ಅತಂತ್ರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದರೊಂದಿಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮದ್ಯಪಾನ, ಮಾದಕ ವಸ್ತುಗಳು, ಆನ್‌ಲೈನ್ ಗೇಮ್‌ಗಳು ಮತ್ತು ಬೆಟ್ಟಿಂಗ್ ಚಟುವಟಿಕೆಗಳು ಯುವಜನರ ಬದುಕು ಹಾಗೂ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಇಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಬಲಿಷ್ಠ ಸಂಘಟನೆಯನ್ನು ನಿರ್ಮಿಸಿ ನಿರಂತರ ಹೋರಾಟ ರೂಪಿಸಬೇಕಿದೆ ಎಂದು ಕರೆ ನೀಡಿದರು.

ಎಐಡಿವೈಒ ಸಂಘಟನೆಯು ಈವರೆಗೆ ಮೂರು ಅಖಿಲ ಭಾರತ ಯುವಜನ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದೆ. ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರನ್ನು ಸಂಘಟಿಸಿ ಹಲವು ಜನಪರ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ನೇತಾಜಿ ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್ ಹಾಗೂ ಚಂದ್ರಶೇಖರ್ ಆಜಾದ್ ಅವರ ಆದರ್ಶ ಮತ್ತು ವಿಚಾರಧಾರೆಗಳನ್ನು ಯುವಜನರಿಗೆ ಪರಿಚಯಿಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೈಚಾರಿಕ ಪ್ರಜ್ಞೆ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಜೈಪುರದಲ್ಲಿ ನಡೆಯಲಿರುವ ಸಮ್ಮೇಳನದ ವಿವರ:

ನವೆಂಬರ್ 27ರಿಂದ ಮೂರು ದಿನಗಳ ಕಾಲ ಜೈಪುರದಲ್ಲಿ ನಡೆಯಲಿರುವ ನಾಲ್ಕನೇ ಅಖಿಲ ಭಾರತ ಯುವಜನ ಸಮ್ಮೇಳನವನ್ನು ಖ್ಯಾತ ಆರ್ಥಿಕ ತಜ್ಞರು ಹಾಗೂ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಅರುಣ್ ಕುಮಾರ್ ಉದ್ಘಾಟಿಸಲಿದ್ದಾರೆ. ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕೇಂದ್ರ ಸಮಿತಿ ಸದಸ್ಯ ಅರುಣ್ ಸಿಂಗ್ ಮುಖ್ಯ ಭಾಷಣ ಮಾಡಲಿದ್ದು, ಎಐಡಿವೈಒ ಪ್ರಧಾನ ಕಾರ್ಯದರ್ಶಿ ಅಮರ್ಜಿತ್ ಕುಮಾರ್ ಮಾತನಾಡಲಿದ್ದಾರೆ.

ಬಹಿರಂಗ ಅಧಿವೇಶನದ ಅಧ್ಯಕ್ಷತೆಯನ್ನು ಅಖಿಲ ಭಾರತ ಅಧ್ಯಕ್ಷ ನಿರಂಜನ್ ನಸ್ಕರ್ ವಹಿಸಲಿದ್ದು, ಸಮಾರೋಪ ಭಾಷಣವನ್ನು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪ್ರವಾಷ್ ಘೋಷ್ ಮಾಡಲಿದ್ದಾರೆ ಎಂದು ಶರಣು ಪಾಟೀಲ್ ವಿವರಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಮುಖಂಡ ಶರಣು ಗಡ್ಡಿ, ಜಿಲ್ಲಾ ಮುಖಂಡರಾದ ಸುಭಾನ್ ನೀರಲಗಿ, ಶಿವಮೂರ್ತಿ ವದಗ್ನಾಳ್, ರಘು ಹೇರೂರು ಹಾಗೂ ಬೆಂಬಲಿಗರಾದ ಸಂಜೀವ್ ಮೂರ್ತಿ ಗುಡಹಳ್ಳಿ, ಗವಿ ಕುಣಿಕೇರಿ ಮತ್ತು ರಾಜಭಕ್ಷಿ ಉಪಸ್ಥಿತರಿದ್ದರು.

“ಸಮ್ಮೇಳನದ ಅಂಗವಾಗಿ ಜಿಲ್ಲಾದ್ಯಂತ ಯುವಜನರ ಗುಂಪು ಚರ್ಚೆ, ಸದಸ್ಯತ್ವ ಅಭಿಯಾನ, ಘಟಕ ರಚನೆ ಸೇರಿದಂತೆ ವಿವಿಧ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದಲೂ ಹಲವು ಪ್ರತಿನಿಧಿಗಳು ಭಾಗವಹಿಸಲಿದ್ದು, ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರೂ ಬೆಂಬಲಿಸಬೇಕು.”
— ದೇವರಾಜ ಮ್ಯಾದನೇರಿ, ಎಐಡಿವೈಓ ಜಿಲ್ಲಾ ಮುಖಂಡ,

Prajavikshane

Chandru R Bhanapaur

Leave a Reply

error: Content is protected !!