LOCAL NEWS : ಸಂತ ಸೇವಾಲಾಲ ಮಹಾರಾಜರ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಲು ಸುರೇಶ ಬಳೂಟಗಿ ಕರೆ!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು: ಸದ್ಗುರು ಶ್ರೀ ಸೇವಾಲಾಲ ಮಹಾರಾಜ ಅವರ ತತ್ವ–ಆಚಾರ–ವಿಚಾರಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಗತಿಯ ಮಾರ್ಗದಲ್ಲಿ ಸಾಗಬೇಕು ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಹೇಳಿದರು.
ಇಂದು ಅವರು (ಭಾನುವಾರ) ಪಟ್ಟಣದ ತಹಸೀಲ್ದಾರರ ಕಚೇರಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕುಕನೂರು ಘಟಕ)ಯಲ್ಲಿ ನಡೆದ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಅಖಂಡ ಭಾರತ ದೇಶದ ಸಂತರು ತಮ್ಮ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾನತೆಯ ಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ’ ಎಂದು ಹೇಳಿದರು.
‘ಶಿಕ್ಷಣ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಮಾಜ ಮುಂದುವರಿಯಬೇಕು’ ಎಂದು ಕರೆ ನೀಡಿದರು.
ಗ್ರೇಡ್–2 ತಹಸೀಲ್ದಾರ್ ಮುರಳೀಧರ ಕುಲಕರ್ಣಿ ಮಾತನಾಡಿ, ‘ಸೇವಾಲಾಲರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ದುಶ್ಚಟ ನಿರ್ಮೂಲನೆ ಮತ್ತು ಮೂಢನಂಬಿಕೆ ತ್ಯಾಗದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಮಕ್ಕಳಿಗೆ ಉತ್ತಮ ಸಂಸ್ಕಾರ–ಸಂಸ್ಕೃತಿ ನೀಡಿ ಅವರನ್ನು ಸಮಾಜದ ಆಸ್ತಿಯನ್ನಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಹಂಪಣ್ಣ ಕಟ್ಟಿಮನಿ, ಮೇಘರಾಜ ಬಳಿಗೇರಿ, ಬಸವಂತಪ್ಪ ನಾಯಕ, ವಿಶ್ವನಾಥ ಬಳಿಗೇರಿ, ಯಮನೂರಪ್ಪ ಕಟ್ಟಿಮನಿ, ಶರಣಪ್ಪ ಚವ್ಹಾಣ, ಯಮನೂರಪ್ಪ ಭಾನಾಪುರ, ರಾಘವೇಂದ್ರ ಬಳಿಗೇರಿ, ನಾಗರಾಜ ಭಾನಾಪುರ, ಮಹೇಶ ಕಾರಭಾರಿ, ಕುಮಾರ ಬಳಿಗೇರಿ, ಗೋಲಪ್ಪ ಹೊನ್ನುಂಚಿ ಸೇರಿದಂತೆ ಹಲವರು ಭಾಗವಹಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ಸಮಾಜದ ಗುರು ಹಿರಿಯರು ಮತ್ತು ಯುವಮಿತ್ರರು ಉಪಸ್ಥಿತರಿದ್ದರು.