BIG NEWS : ಕೊಪ್ಪಳ | ಧಗಧಗಿಸುವ ಬೇಸಿಗೆ : ಕುಡಿಯುವ ನೀರಿಗಾಗಿ ಹಾಹಾಕಾರ; ಜಿಲ್ಲಾ ಪಂಚಾಯತ್‌ನಿಂದ ಸಹಾಯವಾಣಿ ಆರಂಭ!

ಪ್ರಜಾ ವೀಕ್ಷಣೆ ದಿಜಿಟಲ್ ಸುದ್ದಿ :
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದ್ದು, ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಬತ್ತುತ್ತಿರುವ ಕೆರೆಗಳು ಮತ್ತು ಕುಸಿಯುತ್ತಿರುವ ಅಂತರ್ಜಲ ಮಟ್ಟದಿಂದಾಗಿ ಸಾರ್ವಜನಿಕರು ಹನಿ ನೀರಿಗೂ ಪರದಾಡುವಂತ ವಾತಾವರಣ ನಿರ್ಮಾಣವಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ ವಿಶೇಷ ‘ಕುಡಿಯುವ ನೀರಿನ ಸಹಾಯವಾಣಿ (08539-221207 ಸಂಖ್ಯೆ)ಯನ್ನು ಆರಂಭಿಸಲಾಗಿದೆ.

ಸಹಾಯವಾಣಿ ಸಂಖ್ಯೆ : – ಜಿಲ್ಲಾಮಟ್ಟದಲ್ಲಿ 08539-221207 ಸಂಖ್ಯೆಗೆ ಸಂಪರ್ಕಿಸಿ ದೂರು ನೀಡಬಹುದು.
ಈ ಬೇಸಿಗೆಯ ಆರಂಭದಲ್ಲೇ ಹಲವು ಗ್ರಾಮಗಳಲ್ಲಿ ಕೊಳವೆಬಾವಿಗಳು ಬತ್ತಿ ಹೋಗಿವೆ. ಕೆಲವು ಕಡೆಗಳಲ್ಲಿ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಜನರು ಕಿಲೋಮೀಟರ್‌ಗಟ್ಟಲೆ ನಡೆದು ನೀರು ತರುವಂತ ಸ್ಥಿತಿ ಒದಗಿಬಂದಿದೆ.

ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳ ಬಗ್ಗೆ ಸಾರ್ವಜನಿಕರು ನೇರವಾಗಿ ಜಿಲ್ಲಾಡಳಿತ / ಜಿಲ್ಲಾ ಪಂಚಾಯತ್ ಗೆ ಮಾಹಿತಿ ನೀಡಲು ಈ ಸಹಾಯವಾಣಿ ವೇದಿಕೆಯಾಗಲಿದೆ. ದೂರು ಬಂದ ತಕ್ಷಣ ಆಯಾ ವ್ಯಾಪ್ತಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಟ್ಯಾಂಕರ್ ಮೂಲಕ ಅಥವಾ ಪರ್ಯಾಯ ವ್ಯವಸ್ಥೆಯ ಮೂಲಕ ನೀರು ಒದಗಿಸಲು ಕ್ರಮ ಕೈಗೊಳ್ಳಲಿದ್ದಾರೆ.
“ಮುಂದಿನ ಮೂರು ತಿಂಗಳಲ್ಲಿ ಜಿಲ್ಲೆಯ ಸುಮಾರು 133 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಅಂತಹ ಪರಿಸ್ಥಿತಿ-ಯಲ್ಲಿ ಖಾಸಗಿ ಬೋರ್‌ವೆಲ್‌ಗಳು ಹಾಗೂ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ಮೂಲಗಳನ್ನು ಕಾಲಕಾಲಕ್ಕೆ ಪರೀಕ್ಷೆ-ಗೊಳಪಡಿಸಿ, ಶುದ್ಧತೆ ಖಚಿತಪಡಿಸಿ-ಕೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ನೀರಿನ ತುರ್ತು ಪರಿಸ್ಥಿತಿ ಎದುರಾದರೆ ಸಾರ್ವಜನಿಕರು ತಕ್ಷಣ ಸಹಾಯವಾಣಿಗೆ ಕರೆ ಮಾಡಬಹುದು”
