ಹೊಸಪೇಟೆ (ವಿಜಯನಗರ) ಏಪ್ರಿಲ್ 18 : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರಡಿ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ರೈತರು ಭೀತಿಗೊಳಗಾಗಿರುವ ಘಟನೆ ವರದಿಯಾಗಿದೆ.
ವೆಂಕಟಾಪುರ ಗ್ರಾಮದ 76 ವರ್ಷದ ರೈತ ರಾಯಪ್ಪ ಹಾಗೂ ಬುಕ್ಕಸಾಗರ ಗ್ರಾಮದ ರೈತ ರಾಜಶೇಖರ್ ಗೌಡ ಅವರ ಮೇಲೆ ಕರಡಿ ದಾಳಿ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಈ ಘಟನೆಗಳಿಂದ ಸ್ಥಳೀಯ ರೈತರು ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕರಡಿಗಳ ಹಾವಳಿ ದಿನೇದಿನೇ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತ ಸಂಘದ ಮುಖಂಡ ಎಸ್.ಎ. ಖಾದ್ರಿ ಆರೋಪಿಸಿದ್ದಾರೆ.
“ರೈತರ ಜೀವ ಭದ್ರತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕರಡಿಗಳನ್ನು ಅರಣ್ಯ ಪ್ರದೇಶಕ್ಕೆ ಹಿಂತಿರುಗಿಸುವ ವ್ಯವಸ್ಥೆ ಮಾಡಬೇಕು. ಗಾಯಗೊಂಡ ರೈತರಿಗೆ ಪರಿಹಾರ ಒದಗಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.
ಸ್ಥಳೀಯರು ಕೂಡ ಅರಣ್ಯ ಇಲಾಖೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.