You are currently viewing BREAKING NEWS : ಕೊಪ್ಪಳ | ಭಾರಿ ಗಾಳಿ-ಮಳೆಯ ಅಬ್ಬರ; ಧರೆಗುರುಳಿದ ಬೃಹತ್ ಮರಗಳು, ಸಂಪೂರ್ಣ ನಾಶವಾದ ಬಾಳೆ ಬೆಳೆ!

BREAKING NEWS : ಕೊಪ್ಪಳ | ಭಾರಿ ಗಾಳಿ-ಮಳೆಯ ಅಬ್ಬರ; ಧರೆಗುರುಳಿದ ಬೃಹತ್ ಮರಗಳು, ಸಂಪೂರ್ಣ ನಾಶವಾದ ಬಾಳೆ ಬೆಳೆ!

BREAKING NEWS : ಕೊಪ್ಪಳ | ಭಾರಿ ಗಾಳಿ-ಮಳೆಯ ಅಬ್ಬರ; ಧರೆಗುರುಳಿದ ಬೃಹತ್ ಮರಗಳು, ಸಂಪೂರ್ಣ ನಾಶವಾದ ಬಾಳೆ ಬೆಳೆ!

ಕಂಗಾಲಾದ ರೈತರು; ಪರಿಹಾರಕ್ಕೆ ಆಗ್ರಹ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕೊಪ್ಪಳ, ಮೇ 17 : ಕೊಪ್ಪಳ ತಾಲ್ಲೂಕಿನಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರಿ ಗಾಳಿ-ಮಳೆಯಿಂದಾಗಿ ತೀವ್ರ ಹಾನಿ ಸಂಭವಿಸಿದೆ. ತಾಲ್ಲೂಕಿನ ಹ್ಯಾಟಿ ಮತ್ತು ಮೆಳ್ಳಿಕೇರಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಪ್ರಕೃತಿಯ ವಿಕೋಪಕ್ಕೆ ರೈತರು ತತ್ತರಿಸಿ ಹೋಗಿದ್ದಾರೆ.

ಭಾರಿ ಗಾಳಿಯ ವೇಗಕ್ಕೆ ನೂರಾರು ಮರಗಳು ಬುಡಸಮೇತ ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ, ಕೊಯ್ಲಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮೆಳ್ಳಿಕೇರಿಯಲ್ಲಿ ತೀವ್ರ ಹಾನಿ : ಯಂಕರೆಡ್ಡಿ ಡಂಬ್ರಳ್ಳಿಯವರ ಬಾಳೆ ನಾಶ!

ಮೆಳ್ಳಿಕೇರಿ ಗ್ರಾಮದಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಿದೆ. ಇಲ್ಲಿನ ಪ್ರಗತಿಪರ ರೈತ ಯಂಕರೆಡ್ಡಿ ಡಂಬ್ರಳ್ಳಿ ಅವರ ಎರಡು ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ತಲೆ ತಲೆಗೆ ಬಂದಿದ್ದ ಫಸಲನ್ನು ನೋಡುತ್ತಾ ಸಂತಸಪಡುತ್ತಿದ್ದ ರೈತ ಕುಟುಂಬ, ಈಗ ಒಮ್ಮೆಗೆ ಬಂದ ಮಳೆಗೆ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದೆ. “ವರ್ಷಪೂರ್ತಿ ಕಷ್ಟಪಟ್ಟು ಬೆಳೆಸಿದ್ದ ಬಾಳೆ ಈಗ ನೆಲಸಮವಾಗಿದೆ. ಸಾಲ ಮಾಡಿ ಬೆಳೆದಿದ್ದೆವು, ಈಗ ಹೇಗೆ ತೀರಿಸುವುದು ಎಂಬ ಚಿಂತೆ ಕಾಡುತ್ತಿದೆ,” ಎಂದು ಯಂಕರೆಡ್ಡಿ ಅವರ ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

50ಕ್ಕೂ ಹೆಚ್ಚು ಎಕರೆ ಬೆಳೆ ನಾಶ!

ಮೂಲಗಳ ಪ್ರಕಾರ, ಹ್ಯಾಟಿ ಮತ್ತು ಮೆಳ್ಳಿಕೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಹತ್ತಿ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿವೆ. ಭಾರಿ ಗಾಳಿಯ ವೇಗಕ್ಕೆ ಮರಗಳು ಉರುಳಿಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ, ಇದರಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.

ಪರಿಹಾರಕ್ಕೆ ರೈತರ ಆಗ್ರಹ!

ಈ ಅನಿರೀಕ್ಷಿತ ಪ್ರಕೃತಿ ವಿಕೋಪದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ತಕ್ಷಣವೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಹಾನಿಯ ಸಮೀಕ್ಷೆ ನಡೆಸಿ, ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ರೈತ ಸಂಘಟನೆಗಳು ಮತ್ತು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ. ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರ ಸಾಲ ಮನ್ನಾ ಮಾಡಬೇಕು ಮತ್ತು ಅವರಿಗೆ ಬದಲಿ ಬೆಳೆ ಬೆಳೆಯಲು ಸಹಾಯ ಮಾಡಬೇಕು ಎಂದು ಆಗ್ರಹಿಸಲಾಗಿದೆ.

​ಪ್ರಕೃತಿಯ ವಿಕೋಪಕ್ಕೆ ಸಿಲುಕಿ ತತ್ತರಿಸಿರುವ ಕೊಪ್ಪಳ ತಾಲ್ಲೂಕಿನ ರೈತರು, ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ವರದಿ : ಚಂದ್ರು ಆರ್. ಭಾನಾಪುರ್ ✍️

Leave a Reply

error: Content is protected !!