LOCAL NEWS : ಪಟ್ಟಣ ಪಂಚಾಯಿತಿಯ ಶೇ.2 ಹಕ್ಕು ಬದಲಾವಣೆ ಶುಲ್ಕ: ಪರಿಶೀಲನೆಗೆ ಹಿತ ರಕ್ಷಣಾ ವೇದಿಕೆ ಒತ್ತಾಯ!
PV ನ್ಯೂಸ್ ಡಿಜಿಟಲ್ :
ಕುಕನೂರು, ಮೇ 18 : ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ಹಕ್ಕು ಬದಲಾವಣೆ ಪ್ರಕ್ರಿಯೆಗೆ ಮಾರುಕಟ್ಟೆ ಮೌಲ್ಯದ ಶೇ.2ರಷ್ಟು ಶುಲ್ಕ ವಿಧಿಸಲಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶುಲ್ಕ ವ್ಯವಸ್ಥೆಯನ್ನು ಮರುಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕುಕನೂರು ಪಟ್ಟಣ ಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ವೇದಿಕೆಯ ಸಹ ಸಂಚಾಲಕ ಮಂಜುನಾಥ ನಾಡಗೌಡರ್ ಅವರು ಮುಖ್ಯಾಧಿಕಾರಿ ನಾಗೇಶ್ ಅವರಿಗೆ ಮನವಿ ಸಲ್ಲಿಸಿ, ಹಕ್ಕು ಬದಲಾವಣೆ ಶುಲ್ಕಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವಂತೆ ಹಾಗೂ ಸಾರ್ವಜನಿಕರ ಮೇಲಿನ ಆರ್ಥಿಕ ಭಾರವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದರು.
1964ರ ಕರ್ನಾಟಕ ಪುರಸಭೆಗಳ ಅಧಿನಿಯಮ ಮತ್ತು ಸಂಬಂಧಿತ ನಿಯಮಾವಳಿಗಳ ಪ್ರಕಾರ ಶೇ.2ರಷ್ಟು ಶುಲ್ಕ ವಿಧಿಸಲು ಸ್ಪಷ್ಟ ಕಾನೂನು ಆಧಾರವಿದೆಯೇ ಎಂಬ ಪ್ರಶ್ನೆಯನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಕಡಿಮೆ ಪ್ರಮಾಣದ ಶುಲ್ಕ ವಿಧಿಸಲಾಗುತ್ತಿದ್ದು, ಕುಕನೂರಿನಲ್ಲಿ ಮಾತ್ರ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಸಾವಿರಾರು ರೂಪಾಯಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಆಸ್ತಿ ಹಕ್ಕು ಬದಲಾವಣೆ ಪ್ರಕ್ರಿಯೆಯಲ್ಲಿ ಅನಗತ್ಯ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳಿದರು.
ಪಟ್ಟಣ ಪಂಚಾಯಿತಿ ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಸಂಸ್ಥೆಯಾಗಿರುವುದರಿಂದ ಯಾವುದೇ ತೆರಿಗೆ ಅಥವಾ ಶುಲ್ಕ ವಿಧಿಸುವ ಮೊದಲು ಸರ್ಕಾರದ ಆದೇಶ, ಬೈಲಾ ಹಾಗೂ ಸಾಮಾನ್ಯ ಸಭೆಯ ಅನುಮೋದನೆ ಕಡ್ಡಾಯವಾಗಿದೆ. ಹೀಗಾಗಿ ಶೇ.2ರಷ್ಟು ಶುಲ್ಕ ವಸೂಲಿಗೆ ಸಂಬಂಧಿಸಿದ ಸರ್ಕಾರದ ಆದೇಶ, ಸಾಮಾನ್ಯ ಸಭೆಯ ನಿರ್ಣಯ, ಬೈಲಾ ಹಾಗೂ ಲೆಕ್ಕಪತ್ರಗಳ ವಿವರವನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್, ಸಾರ್ವಜನಿಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ತೆಗೆದುಕೊಂಡು ಕಾನೂನುಬದ್ಧವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಸಂಚಾಲಕ ರವಿ ಜಕ್ಕ, ಸದಸ್ಯರಾದ ಬಸಪ್ಪ ಲಾಲಗೊಂಡ್ರ, ಬಸವಣ್ಣ ಈಬೇರಿ, ರಾಮನಗೌಡ ಅರಿಶಿನಬಿಡಿ, ಶರಣಪ್ಪ ಚೆಂಡೂರು, ವೀರೇಶ ಸಬರದ, ಮಾಂತೇಶ ಹುಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.