LOCAL NEWS : 27ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ: ಬನ್ನಿಕೊಪ್ಪ ದೇಶಭಕ್ತರ ನಾಡು, ಸೈನಿಕರ ನೆಲೆ – ನಾಗರಾಜ ವೆಂಕಟಾಪುರ
PV NEWS ಕನ್ನಡ 24×7 :
ಕುಕನೂರು, 26 (PV NEWS ಕನ್ನಡ 24×7): ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದೇಶಭಕ್ತರ ನಾಡೆಂದೇ ಹೆಸರಾಗಿರುವ ಬನ್ನಿಕೊಪ್ಪ ಗ್ರಾಮದಲ್ಲಿ 27ನೇ ಕಾರ್ಗಿಲ್ ವಿಜಯೋತ್ಸವವನ್ನು ಭಾನುವಾರ ಭಕ್ತಿ, ದೇಶಪ್ರೇಮ ಮತ್ತು ಗೌರವದ ವಾತಾವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರು ಹಾಗೂ ರೈತರ ಸ್ಮಾರಕ ಉದ್ಯಾನದಲ್ಲಿ ಪೂಜೆ ಹಾಗೂ ಮಂಗಳಾರತಿ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ವೆಂಕಟಾಪುರ, ಬನ್ನಿಕೊಪ್ಪ ಗ್ರಾಮವು 26 ಸ್ವಾತಂತ್ರ್ಯ ಹೋರಾಟಗಾರರು ಮತ್ತು 28 ವೀರ ಯೋಧರನ್ನು ದೇಶಸೇವೆಗೆ ನೀಡಿರುವ ಹೆಮ್ಮೆಯ ಗ್ರಾಮವಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ ನಿರ್ಮಿಸಲಾಗಿರುವ ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರು ಹಾಗೂ ರೈತರ ಸ್ಮಾರಕವು ಗ್ರಾಮದ ದೇಶಭಕ್ತಿಯ ಸಂಕೇತವಾಗಿದೆ ಎಂದ ಅವರು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ತಾವು ಸೇನೆಯಲ್ಲಿ ಪಡೆದ ಅನುಭವಗಳನ್ನು ಹಂಚಿಕೊಂಡರು. ಯುವಕರು ಸೇನೆಗೆ ಸೇರಲು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಸೈನಿಕ ಬಸವರಾಜ ಮಾಳೆಕೊಪ್ಪ ಅವರು ಸೈನಿಕ ಸೇವೆಯಲ್ಲಿನ ಸವಾಲುಗಳು ಹಾಗೂ ಕಾರ್ಗಿಲ್ ಯುದ್ಧದ ಅನುಭವಗಳನ್ನು ವಿವರಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಸಂಗನಗೌಡ ಎಸ್. ವೀರಪ್ಪಗೌಡರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಮತ್ತು ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ದೇಶದ ಉತ್ತಮ ಸೈನಿಕರಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ರೈತ ಚನ್ನಪ್ಪ ಗೊಂದಿ, ನಿವೃತ್ತ ಕಾಲೇಜು ಉಪನ್ಯಾಸಕಿ ಗಿರಿಜಾ ಕನ್ನಾರಿ ಹಾಗೂ ನಿವೃತ್ತ ಕೆಎಸ್‌ಆರ್‌ಟಿಸಿ ನಿಯಂತ್ರಕ ವೆಂಕಣ್ಣ ಯಾರಾಶಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ನಾರಾಯಣ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ಗ್ರಾಮಸ್ಥರು, ಹಿರಿಯರು, ತಾಯಂದಿರು, ಯುವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ “ಭಾರತ ಮಾತಾ ಕೀ ಜೈ”, “ವಂದೇ ಮಾತರಂ”, “ಕಾರ್ಗಿಲ್ ವಿಜಯೋತ್ಸವಕ್ಕೆ ಜಯ”, “ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಜಯ”, “ಬನ್ನಿಕೊಪ್ಪದ ಸ್ವಾತಂತ್ರ್ಯ ಹೋರಾಟಗಾರರಿಗೆ ಜಯ” ಸೇರಿದಂತೆ ವಿವಿಧ ಜಯಘೋಷಗಳನ್ನು ಮೊಳಗಿಸಿ ದೇಶಭಕ್ತಿಯ ವಾತಾವರಣದಲ್ಲಿ ವಿಜಯೋತ್ಸವವನ್ನು ಆಚರಿಸಿದರು.