PV NEWS : ಕುಕನೂರು | ವಿವಿಧ ಧರ್ಮಗಳ ಶ್ರೇಷ್ಠ ಮೌಲ್ಯಗಳ ಸಾಮ್ಯತೆ ವಿವರಿಸುವ ಸಂದರ್ಭದಲ್ಲಿ ರಾಯರೆಡ್ಡಿ ಹೇಳಿಕೆ: ವಕೀಲ & ರಾಯರೆಡ್ಡಿ ಆಪ್ತ ಎಂ.ಎಚ್. ಉಜ್ಜಮ್ಮನವರ ಸ್ಪಷ್ಟನೆ
PV NEWS ಕನ್ನಡ 24×7
ಕುಕನೂರು, ಸೆ. 03: ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಅದರ ಮೂಲ ಸಂದರ್ಭದಿಂದ ಬೇರ್ಪಡಿಸಿ ನೋಡಬಾರದು. ವಿವಿಧ ಧರ್ಮಗಳಲ್ಲಿರುವ ಉತ್ತಮ ಮಾನವೀಯ ಮೌಲ್ಯಗಳು ಮತ್ತು ವಿಚಾರಗಳ ಸಾಮ್ಯತೆಯನ್ನು ವಿವರಿಸುವ ಸಂದರ್ಭದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂದು ಹೈಕೋರ್ಟ್ ವಕೀಲರಾದ ಎಂ.ಹೆಚ್. ಉಜ್ಜಮ್ಮನವರ ರಾಜೂರು ಸ್ಪಷ್ಟಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಬಸವರಾಜ ರಾಯರೆಡ್ಡಿ ಅವರು ಯಾವುದೇ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಅಥವಾ ಧರ್ಮವೊಂದನ್ನು ಅವಹೇಳನ ಮಾಡುವ ಉದ್ದೇಶದಿಂದ ಮಾತನಾಡಿರಲಿಲ್ಲ. ಬದಲಾಗಿ, ವಿವಿಧ ಧರ್ಮಗಳು, ಧಾರ್ಮಿಕ ಗ್ರಂಥಗಳು ಮತ್ತು ತತ್ತ್ವಗಳಲ್ಲಿರುವ ಉತ್ತಮ ವಿಚಾರಗಳು ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದ್ದರು ಎಂದು ಹೇಳಿದರು.
ಬೌದ್ಧ ಧರ್ಮ, ಇಸ್ಲಾಂ, ಕುರಾನ್, ಪ್ರವಾದಿ ಪೈಗಂಬರ್, ಮೆಕ್ಕಾ ಮತ್ತು ಬೈಬಲ್ ಸೇರಿದಂತೆ ವಿವಿಧ ಧಾರ್ಮಿಕ ಪರಂಪರೆಗಳಲ್ಲಿರುವ ಉತ್ತಮ ವಿಚಾರಗಳನ್ನು ಉಲ್ಲೇಖಿಸಿ, ಅವುಗಳಲ್ಲಿ ಕಾಣುವ ಮಾನವೀಯತೆ, ಸಮಾನತೆ ಮತ್ತು ಉನ್ನತ ನೈತಿಕ ಮೌಲ್ಯಗಳನ್ನು ಬಸವ ಹಾಗೂ ಶರಣ ತತ್ತ್ವಗಳೊಂದಿಗೆ ಹೋಲಿಕೆ ಮಾಡುವ ರೀತಿಯಲ್ಲಿ ರಾಯರೆಡ್ಡಿ ಮಾತನಾಡಿದ್ದರು ಎಂದು ಉಜ್ಜಮ್ಮನವರ ರಾಜೂರು ವಿವರಿಸಿದರು.
ಕುರಾನ್ ಮತ್ತು ಇಸ್ಲಾಂ ಧರ್ಮದಲ್ಲಿಯೂ ಶರಣ ಹಾಗೂ ಬಸವ ತತ್ತ್ವಗಳಿಗೆ ಹೋಲುವಂತಹ ಉತ್ತಮ ಮೌಲ್ಯಗಳು ಕಂಡುಬರುತ್ತವೆ ಎಂಬುದನ್ನು ಸಚಿವರು ಹೇಳಿದ್ದರು. ಹೀಗಾಗಿ ಅವರ ಹೇಳಿಕೆಯನ್ನು ಯಾವುದೇ ಧರ್ಮದ ವಿರುದ್ಧದ ಹೇಳಿಕೆಯಾಗಿ ಅರ್ಥೈಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈಗಾಗಲೇ ಸೂಕ್ತ ಸ್ಪಷ್ಟನೆ ನೀಡಿದ್ದು, ಹೇಳಿಕೆಯ ಉದ್ದೇಶ ಮತ್ತು ಅದರ ಮೂಲ ಸಂದರ್ಭವನ್ನು ಗಮನಿಸಬೇಕು ಎಂದು ಉಜ್ಜಮ್ಮನವರ ರಾಜೂರು ತಿಳಿಸಿದರು.
ರಾಜಕೀಯದಲ್ಲಿ ವಿಚಾರಗಳ ಬಗ್ಗೆ ಟೀಕೆ-ಟಿಪ್ಪಣಿ ಮಾಡುವುದು ಸಹಜ. ಆದರೆ, ವಿಚಾರಾಧಾರಿತ ಟೀಕೆಯ ಬದಲಾಗಿ ಪ್ರಬುದ್ಧ ರಾಜಕಾರಣಿಯಾಗಿರುವ ಬಸವರಾಜ ರಾಯರೆಡ್ಡಿ ಅವರನ್ನು ವೈಯಕ್ತಿಕವಾಗಿ ‘ಎಡಬಿಡಂಗಿ’ ಎಂದು ಕರೆಯುವುದು ಸರಿಯಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಟೀಕೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಬಸವರಾಜ ರಾಯರೆಡ್ಡಿ ಅವರ ಕುಟುಂಬವೂ ಬಸವ ಮತ್ತು ಶರಣ ತತ್ತ್ವಗಳ ಹಿನ್ನೆಲೆಯನ್ನು ಹೊಂದಿದೆ. ಅವರ ತಂದೆ ಬಸಲಿಂಗಪ್ಪ ಹಾಗೂ ತಾಯಿ ಉತ್ತಮ ಮೌಲ್ಯಗಳನ್ನು ಹೊಂದಿದ ಪರಂಪರೆಯಿಂದ ಬಂದವರು. ಈ ಹಿನ್ನೆಲೆಯಲ್ಲಿಯೇ ವಿವಿಧ ಧರ್ಮಗಳಲ್ಲಿರುವ ಉತ್ತಮ ವಿಚಾರಗಳನ್ನು ಗೌರವಿಸಿ, ಅವುಗಳಲ್ಲಿರುವ ಸಾಮ್ಯತೆಯನ್ನು ವಿವರಿಸುವುದು ರಾಯರೆಡ್ಡಿ ಅವರ ಚಿಂತನೆಯ ಭಾಗವಾಗಿದೆ ಎಂದು ಅವರು ಹೇಳಿದರು.
ಹೀಗಾಗಿ ಹೇಳಿಕೆಯ ಕೆಲ ಪದಗಳನ್ನು ಮಾತ್ರ ಪ್ರತ್ಯೇಕವಾಗಿ ನೋಡುವ ಬದಲು, ವಿವಿಧ ಧರ್ಮಗಳಲ್ಲಿನ ಉತ್ತಮ ಮೌಲ್ಯಗಳನ್ನು ಪರಸ್ಪರ ಹೋಲಿಸಿ ವಿವರಿಸುವ ಮೂಲ ಸಂದರ್ಭದಲ್ಲಿಯೇ ಸಚಿವರ ಹೇಳಿಕೆಯನ್ನು ಅರ್ಥೈಸಬೇಕು ಎಂದು ಎಂ.ಹೆಚ್. ಉಜ್ಜಮ್ಮನವರ ರಾಜೂರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾರುತಿ ಭಂಡಾರಿ ಹಾಗೂ ಗುಡದಪ್ಪ ಭಂಗಿ ಉಪಸ್ಥಿತರಿದ್ದರು.