You are currently viewing PV NEWS : ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ವಿವಾದ: ಕುಕನೂರು ಮುಸ್ಲಿಂ ಸಮುದಾಯದ ಮುಖಂಡರಿಂದ ಸ್ಪಷ್ಟೀಕರಣ! 

PV NEWS : ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ವಿವಾದ: ಕುಕನೂರು ಮುಸ್ಲಿಂ ಸಮುದಾಯದ ಮುಖಂಡರಿಂದ ಸ್ಪಷ್ಟೀಕರಣ! 

PV NEWS : ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ವಿವಾದ: ಕುಕನೂರು ಮುಸ್ಲಿಂ ಸಮುದಾಯದ ಮುಖಂಡರಿಂದ ಸ್ಪಷ್ಟೀಕರಣ! 

PV NEWS ಕನ್ನಡ 24×7: 

ಕುಕನೂರು, ಸೆ. 02: ಸಚಿವ ಬಸವರಾಜ ರಾಯರೆಡ್ಡಿ ಅವರು ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ಕುರಿತು ಉಂಟಾಗಿರುವ ವಿವಾದಕ್ಕೆ ಕುಕನೂರು ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು ಸ್ಪಷ್ಟೀಕರಣ ನೀಡಿದ್ದಾರೆ.

ಕುಕನೂರಿನಲ್ಲಿ ಬುಧವಾರ (ಸೆ.02) ಮಾಧ್ಯಮಗಳೊಂದಿಗೆ ಮಾತನಾಡಿದ ಸಮುದಾಯದ ಮುಖಂಡರು, ಸಚಿವರು ಯಾವುದೇ ಧರ್ಮ ಅಥವಾ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ವಿವಾದ ಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಚಿವರು ಧರ್ಮಗಳು ಹಾಗೂ ಅವುಗಳ ಸಿದ್ಧಾಂತಗಳ ಕುರಿತು ಸಾಂದರ್ಭಿಕವಾಗಿ ಮಾತನಾಡಿದ್ದರು. ಈ ವೇಳೆ ಅವರು ವಿವಿಧ ಧರ್ಮಗಳ ವಿಚಾರಗಳನ್ನು ಹಾಗೂ ಕುರಾನ್‌ ಅನ್ನು ಓದಿರುವುದಾಗಿ ತಮ್ಮ ಅನುಭವ ಹಂಚಿಕೊಂಡಿದ್ದರು ಎಂದು ಸಮುದಾಯದ ಹಿರಿಯ ಮುಖಂಡ ಖಾಸಿಂ ಸಾಬ್ ತಿಳಿಸಿದ್ದಾರೆ.

ಬಸವಣ್ಣನವರು ಹಾಗೂ ಪೈಗಂಬರ ಮೊಹಮ್ಮದ್ ಅವರ ವಿಚಾರಧಾರೆಗಳಲ್ಲಿ ಸಾಮ್ಯತೆಗಳಿದ್ದು, ಎಲ್ಲ ಧರ್ಮಗಳಲ್ಲಿಯೂ ಉತ್ತಮ ವಿಚಾರಗಳಿವೆ; ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದುಕೊಳ್ಳಬೇಕು ಎಂಬ ಸಂದೇಶವನ್ನು ಸಚಿವರು ನೀಡಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಇಸ್ಲಾಂ ಧರ್ಮವೇ ಶ್ರೇಷ್ಠ’ ಎಂದಿಲ್ಲ

ಸಚಿವರು “ಇಸ್ಲಾಂ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠ” ಎಂದು ಹೇಳಿದ್ದಾರೆ ಎಂಬ ರೀತಿಯಲ್ಲಿ ಹೇಳಿಕೆಯನ್ನು ಬಿಂಬಿಸಿ ವಿವಾದ ಸೃಷ್ಟಿಸಿರುವುದು ಸುಳ್ಳು ಹಾಗೂ ಸೃಷ್ಟಿಸಲ್ಪಟ್ಟ ವಿಚಾರವಾಗಿದೆ ಎಂದು ಕುಕನೂರು ಮುಸ್ಲಿಂ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವರು ಯಾವುದೇ ಸಮಾಜ ಅಥವಾ ಧರ್ಮದ ವಿರುದ್ಧ ಮಾತನಾಡಿಲ್ಲ. ಬದಲಾಗಿ ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಯಿಂದ ನೋಡಬೇಕು ಹಾಗೂ ಪ್ರತಿಯೊಂದು ಧರ್ಮದಲ್ಲಿರುವ ಉತ್ತಮ ವಿಚಾರಗಳನ್ನು ಗೌರವಿಸಬೇಕು ಎಂಬುದನ್ನು ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜಕೀಯಗೊಳಿಸದಂತೆ ಮನವಿ

ಸಚಿವರ ಹೇಳಿಕೆಯನ್ನು ಆಧಾರವಾಗಿಸಿಕೊಂಡು ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಈ ವಿಚಾರವನ್ನು ಮರುಪರಿಶೀಲಿಸಬೇಕು ಎಂದು ಮುಖಂಡರು ಮನವಿ ಮಾಡಿದ್ದಾರೆ.

ಕುಕನೂರಿನಲ್ಲಿ ನಡೆದ ಸಾಮೂಹಿಕ ವಿವಾಹದಂತಹ ಸದ್ಭಾವನೆ ಮತ್ತು ಸಾಮಾಜಿಕ ಸಾಮರಸ್ಯ ಸಾರುವ ಕಾರ್ಯಕ್ರಮವನ್ನು ರಾಜಕೀಯ ವಿವಾದದ ವಿಷಯವನ್ನಾಗಿ ಮಾಡುವುದು ಸರಿಯಲ್ಲ. ಹೇಳಿಕೆಯ ಪೂರ್ಣ ಸಂದರ್ಭವನ್ನು ಅರ್ಥಮಾಡಿಕೊಂಡು ವಾಸ್ತವಾಂಶಗಳನ್ನು ಜನರಿಗೆ ತಿಳಿಸಬೇಕು ಎಂದು ಅವರು ಹೇಳಿದ್ದಾರೆ.

ಸಮಾಜದಲ್ಲಿ ಅನಗತ್ಯ ಗೊಂದಲ ಹಾಗೂ ಭಿನ್ನಾಭಿಪ್ರಾಯ ಮೂಡದಂತೆ ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳನ್ನು ರಾಜಕೀಯವಾಗಿ ಬಳಸಿಕೊಳ್ಳದೆ ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ ನೀಡಬೇಕು ಎಂದು ಕುಕನೂರು ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು ಮನವಿ ಮಾಡಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!