PV NEWS : ಕುಕನೂರು | ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ತಿರುಚಿ ಬಿಂಬಿಸದಿರಿ: ಕಾಂಗ್ರೆಸ್ ಕಾರ್ಯಕರ್ತ ಗಗನ ನೋಟಗಾರ
PV NEWS ಕನ್ನಡ 24×7 |
ಕುಕನೂರು, ಸೆ. 01: ಪಟ್ಟಣದಲ್ಲಿ ಆಗಸ್ಟ್ 30ರಂದು ನಡೆದ ಮುಸ್ಲಿಂ ಬಾಂಧವರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ನೀಡಿದ ಹೇಳಿಕೆಯನ್ನು ಕೆಲವರು ತಪ್ಪಾಗಿ ವ್ಯಾಖ್ಯಾನಿಸಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ತಾಲ್ಲೂಕು ವಕ್ತಾರ ಗಗನ ನೋಟಗಾರ ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಧರ್ಮವನ್ನು ವೈಭವೀಕರಿಸುವ ಅಥವಾ ಇತರ ಧರ್ಮಗಳನ್ನು ಕೀಳಾಗಿ ಬಿಂಬಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
‘ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ನೀತಿ, ನಿಯಮ ಹಾಗೂ ಉನ್ನತ ತತ್ವಗಳಿವೆ. ಅವುಗಳನ್ನು ಪಾಲಿಸುವುದರಿಂದ ಮಾನವ ಜೀವನ ಉನ್ನತೀಕರಣಗೊಳ್ಳುತ್ತದೆ ಎಂಬ ಆಶಯದಿಂದ ಸಚಿವರು ಮಾತನಾಡಿದ್ದಾರೆ. ಅವರು ಇಸ್ಲಾಂ ಧರ್ಮದ ಉತ್ತಮ ತತ್ವಗಳನ್ನು ಶ್ಲಾಘಿಸಿದ್ದಾರೆಯೇ ಹೊರತು, ಇತರ ಧರ್ಮಗಳು ಕೀಳು ಎಂದು ಎಲ್ಲಿಯೂ ಹೇಳಿಲ್ಲ’ ಎಂದು ತಿಳಿಸಿದರು.
ಹೇಳಿಕೆಯ ಸಂಪೂರ್ಣ ಹಿನ್ನೆಲೆ ಅರಿಯಬೇಕು
ಸಚಿವರ ಹೇಳಿಕೆಯ ಸಂಪೂರ್ಣ ಸಂದರ್ಭವನ್ನು ಪರಿಗಣಿಸದೆ, ಕೇವಲ ಕೆಲವು ವಾಕ್ಯಗಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ತಪ್ಪು ಸಂದೇಶ ಹರಡುವ ಪ್ರಯತ್ನ ನಡೆಯುತ್ತಿದೆ. ಯಾವುದೇ ವಿಷಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಅದರ ಸಂಪೂರ್ಣ ಹಿನ್ನೆಲೆಯನ್ನು ಅರಿಯಬೇಕು ಎಂದು ಗಗನ ನೋಟಗಾರ ಮನವಿ ಮಾಡಿದರು.
ಎಲ್ಲ ಧರ್ಮಗಳಿಗೂ ಗೌರವ ನೀಡುವುದು ಕಾಂಗ್ರೆಸ್‌ನ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಅವರ ನಿಲುವಾಗಿದೆ. ಜೈನ, ಹಿಂದೂ, ಮುಸ್ಲಿಂ, ಸಿಖ್, ಬೌದ್ಧ ಸೇರಿದಂತೆ ಎಲ್ಲ ಧರ್ಮಗಳೂ ತಮ್ಮದೇ ಆದ ಶ್ರೇಷ್ಠ ತತ್ವಗಳನ್ನು ಹೊಂದಿವೆ. ವ್ಯಕ್ತಿಯೊಬ್ಬರಿಗೆ ತಮ್ಮ ನಂಬಿಕೆ ಅಥವಾ ನಿರ್ದಿಷ್ಟ ಧಾರ್ಮಿಕ ಆಚರಣೆ ಶ್ರೇಷ್ಠವೆನಿಸುವುದು ಸಹಜ ಎಂದು ಅವರು ಹೇಳಿದರು.
ಬಸವ ತತ್ವದ ಆಶಯ
ಬಸವ ತತ್ವದ ಆಶಯದಂತೆ ಸಚಿವರು ಎಲ್ಲ ಧರ್ಮಗಳನ್ನೂ ಗೌರವಿಸುತ್ತಾರೆ. ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಎಲ್ಲ ಧರ್ಮಗಳ ಬಗ್ಗೆ ಗೌರವ ಹೊಂದಿರುವುದನ್ನು ಅವರು ತೋರಿಸಿದ್ದಾರೆ. ಹೀಗಾಗಿ ಹಿಂದೂ ಧರ್ಮ ಸೇರಿದಂತೆ ಯಾವುದೇ ಧರ್ಮಕ್ಕೆ ಸಚಿವರು ಅಪಚಾರವೆಸಗಿಲ್ಲ ಎಂದು ಗಗನ ನೋಟಗಾರ ಹೇಳಿದರು.
ಸಚಿವರ ಮಾತಿನ ನೈಜ ಅರ್ಥವನ್ನು ಸಾರ್ವಜನಿಕರಿಗೆ ತಿಳಿಸುವುದು ಹಾಗೂ ಹೇಳಿಕೆಯನ್ನು ರಾಜಕೀಯ ಉದ್ದೇಶಕ್ಕಾಗಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂಬ ಆರೋಪಗಳಿಗೆ ಸ್ಪಷ್ಟನೆ ನೀಡುವುದು ಸುದ್ದಿಗೋಷ್ಠಿಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
‘ಹೇಳಿಕೆಯ ಮಧ್ಯದ ತುಣುಕುಗಳನ್ನು ಮಾತ್ರ ತೆಗೆದುಕೊಂಡು ವೈಭವೀಕರಿಸುವ ಬದಲು, ಸಚಿವರು ಯಾವ ಸಂದರ್ಭದಲ್ಲಿ ಮತ್ತು ಯಾವ ಉದ್ದೇಶದಿಂದ ಮಾತನಾಡಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ಗಮನಿಸಬೇಕು’ ಎಂದು ಅವರು ಹೇಳಿದರು.