PV SPECIAL STORY : ಬೆದವಟ್ಟಿ ಗ್ರಾಮದಲ್ಲಿ ಅಮಾನವೀಯ ಕೃತ್ಯ..!: ‘ಮಮತೆಯ ತೊಟ್ಟಿಲು’ ಬಳಸಲು CDPO & EO ಬೆಟದಪ್ಪ ಮಾಳೆಕೊಪ್ಪ ಮನವಿ!

ವಿಶೇಷ ವರದಿ : ಚಂದ್ರು ಆರ್. ಭಾನಾಪುರ್.
ಮಗು ಬೇಡವೆನಿಸಿದಲ್ಲಿ ‘ಮಮತೆಯ ತೊಟ್ಟಿಲು’ ಬಳಸಲು CDPO ಬೆಟ್ಟದಪ್ಪ ಮಾಳೇಕೊಪ್ಪ ಮನವಿ!

PV NEWS ಕನ್ನಡ 24×7:
ಕುಕನೂರು, ಸೆ.01: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆದವಟ್ಟಿ ಗ್ರಾಮದ ಸಮೀಪದ ಬ್ರಿಜ್ ಕಮ್ ಬ್ಯಾರೇಜ್‌ನಲ್ಲಿ ನವಜಾತ ಗಂಡು ಶಿಶುವೊಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆದವಟ್ಟಿ ಗ್ರಾಮದ ಪಕ್ಕದಲ್ಲಿರುವ ಬ್ರಿಜ್ ಕಮ್ ಬ್ಯಾರೇಜ್‌ನ ಬಳಿ ಬೃಹತ್ ಆಕಾರದ ಜಲಜೀವನ್ ಮಿಷನ್ ನೀರಿನ ಪೈಪ್ ಸಮೀಪ ಈ ಘಟನೆ ನಡೆದಿದೆ. ಬ್ಯಾರೇಜ್‌ನಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿದ್ದು, ಇದೇ ನೀರಿನಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಹಾಗೂ ಆಘಾತಕ್ಕೆ ಕಾರಣವಾಗಿದೆ.
ಶಿಶುವಿನ ಶವ ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿಶುವಿನ ಶವ ನೀರಿನಲ್ಲಿ ಎಷ್ಟು ಸಮಯದಿಂದ ಇತ್ತು ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ. ಸ್ಥಳೀಯರು ಕಳೆದ ಎರಡು-ಮೂರು ದಿನಗಳ ಹಿಂದೆ ಶಿಶುವನ್ನು ನೀರಿಗೆ ಎಸೆದಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಕುರಿತು ತನಿಖೆಯಿಂದಲೇ ನಿಖರ ಮಾಹಿತಿ ಹೊರಬರಬೇಕಿದೆ. ನವಜಾತ ಶಿಶುವನ್ನು ನೀರಿಗೆ ಎಸೆದು ಹೋಗಿರುವುದೇ ಅಥವಾ ಬೇರೆ ಯಾವುದೇ ಕಾರಣದಿಂದ ಘಟನೆ ಸಂಭವಿಸಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿಶುವಿನ ಗುರುತು ಹಾಗೂ ಘಟನೆಯ ಹಿಂದಿರುವ ವ್ಯಕ್ತಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

‘ಮಮತೆಯ ತೊಟ್ಟಿಲು’ ಬಳಸಲು CDPO ಬೆಟ್ಟದಪ್ಪ ಮಾಳೇಕೊಪ್ಪ ಮನವಿ!
ಈ ಘಟನೆ ಕುರಿತು CDPO ಬೆಟ್ಟದಪ್ಪ ಮಾಳೇಕೊಪ್ಪ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇಂತಹ ಅಮಾನುಷ ಕೃತ್ಯಗಳು ಖಂಡನೀಯ ಎಂದಿದ್ದಾರೆ. ಮಗುವನ್ನು ಸಾಕಲು ಸಾಧ್ಯವಿಲ್ಲದ ಅಥವಾ ಮಗು ಬೇಡವೆನಿಸುವ ಸಂದರ್ಭಗಳಲ್ಲಿ ಮಗುವನ್ನು ಅಪಾಯಕ್ಕೆ ತಳ್ಳುವ ಬದಲು ‘ಮಮತೆಯ ತೊಟ್ಟಿಲು’ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಜೀವಂತ ಮಗುವನ್ನು ‘ಮಮತೆಯ ತೊಟ್ಟಿಲು’ನಲ್ಲಿ ಇರಿಸಿದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತವು ಮಗುವಿನ ರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು CDPO ಬೆಟ್ಟದಪ್ಪ ಮಾಳೇಕೊಪ್ಪ ತಿಳಿಸಿದ್ದಾರೆ.

