SPECIAL STORY : ಕೊಪ್ಪಳ | 1 ಕೋಟಿ ಅನುದಾನ ಲೂಟಿ ಆರೋಪ : ಹಳ್ಳ ಹಿಡಿದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ!!
ಪ್ರಜಾವೀಕ್ಷಣೆಯ ವಿಶೇಷ ವರದಿ :
ಕೊಪ್ಪಳ : ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ (CMGVP) ಅಡಿಯಲ್ಲಿ ಸಮಗ್ರ ಗ್ರಾಮೀಣಾಭಿರುದ್ಧಿಗೆ 1 ಕೋಟಿ ರೂಪಾಯಿಗಳು ಬಿಡುಗಡೆ ಆಗಿದ್ದು, ಅದು ಕೇವಲ ಕಾಗದದಲ್ಲಿ ಮಾತ್ರ, ವಾಸ್ತವದಲ್ಲಿ ಬೇರೇನೇ ಕಥೆ ಇದೆ. ಇದಕ್ಕೆ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮ ಜೀವಂತ ನಿದರ್ಶನವಾಗಿದೆ.
2017-18 ನೇ ಸಾಲಿನ ಮುಖ್ಯಮಂತ್ರಿಗಳ ಗ್ರಾಮೀಣ ವಿಕಾಸ ಯೋಜನೆ ಅಡಿಯಲ್ಲಿ ಕೊಪ್ಪಳ ತಾಲೂಕಿನ ಬೂದುಗುಂಪ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೇಶನ ಹಳ್ಳಿ ಗ್ರಾಮ ಆಯ್ಕೆಯಾಗಿತ್ತು. ಈ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ನಾಗೇಶನಹಳ್ಳಿ ಗ್ರಾಮದಲ್ಲಿ 1 ಕೋಟಿ ಅನುದಾನ ಲೂಟಿ ಆರೋಪ!!
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ನಾಗೇಶನಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು 1 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಗ್ರಾಮದ ಕೆಲವು ಮುಖಂಡರು ಸೇರಿ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ನಾಗೇಶನಹಳ್ಳಿ ಯುವ ನಾಯಕರು ಹಾಗೂ ಗ್ರಾಮಸ್ಥರು ಸೇರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೊಪ್ಪಳ ಇವರಿಗೆ ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಗೆ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
1 ಕೋಟಿ ಅನುದಾನದಲ್ಲಿ ಯಾವ ಯಾವ ಕಾಮಗಾರಿಗೆ ಎಷ್ಟು ಹಣ ಮೀಸಲು?
12 ಲಕ್ಷ ಅನುದಾನದಲ್ಲಿ ವ್ಯಾಯಾಮ ತರಬೇತಿ ಕೇಂದ್ರ ಜಿಮ್ ನಿರ್ಮಾಣ.
12 ಲಕ್ಷ ಅನುದಾನದಲ್ಲಿ ಗ್ರಾಮಸಭಾ ಭವನ ನಿರ್ಮಾಣ.
6 ಲಕ್ಷ ರೂ. ಗಳ ಅನುದಾನದಲ್ಲಿ ದೇವಸ್ಥಾನ/ ಮಂದಿರ ಮಸೀದ್/ ಚರ್ಚ್ ಗಳ ಪುನರ್ಜೀವನ ಜೀರ್ಣೋದ್ಧಾರ ಮಾಡುವುದಕ್ಕಾಗಿ ಮೀಸಲು.
50 ಲಕ್ಷ ರೂ. ಅನುದಾನದಲ್ಲಿ ಗ್ರಾಮದಲ್ಲಿರುವ ಸಿಸಿ ರಸ್ತೆಗಳ ನಿರ್ಮಾಣ ಮಾಡಿದ್ದೂ, ಸಂಪೂರ್ಣ ಕಳಪೆ ಕಾಮಗಾರಿ.
10 ಲಕ್ಷ ರೂ. ಅನುದಾನದಲ್ಲಿ ತಿಪ್ಪೇಗುಂಡಿಗಳ ವೈಜ್ಞಾನಿಕ ಹಾಗೂ ಆಧುನಿಕ ರೀತಿಯಲ್ಲಿ ಸಂಸ್ಕರಣೆ ಮಾಡುವ ಘಟಕಗಳ ನಿರ್ಮಾಣ.
3 ಲಕ್ಷ ಅನುದಾನದಲ್ಲಿ ಸೌರ ಬೆಳಕು ಹಾಗೂ ಎಲ್.ಇ.ಡಿ ದ್ವೀಪಗಳ ಅಳವಡಿಕೆ
2 ಲಕ್ಷ ರೂ. ಅನುದಾನದಲ್ಲಿ ಗ್ರಾಮ ಪಂಚಾಯತ್ ನಡವಳಿಕೆಗಳು ಟೆಲಿವಿಜನ ಮುಖಾಂತರ ನೇರಪ್ರಸಾರ ಹಾಗೂ ಮೂಲಭೂತ ಸೌಕರ್ಯದ ಪೂರೈಕೆಗೆ
ಹೀಗೆ ಹಲವಾರು ಗ್ರಾಮೀಣ ಅಭಿವೃದ್ಧಿ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣದಲ್ಲಿ ಪ್ರತಿಶತ 70ರಷ್ಟು ಕಾಮಗಾರಿಗಳಾಗಿಲ್ಲ ಅನುದಾನದ ಹಣವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೂಡ ಇಲ್ಲಿನ ಅಧಿಕಾರಿಗಳು ಜನಪ್ರತಿನಿಧಿಗಳ ಮೇಲೆ ಇದೆ ಎಂದು ಕೇಳಿ ಬರುತ್ತದೆ.
ಇಂದು ನಾಗೇಶನಹಳ್ಳಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ ಹಾಗೂ ಪರಿಶೀಲನೆ..!!
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಲಹೆಯಂತೆ ಗ್ರಾಮೋದ್ದಾರ ಕಾಮಗಾರಿ ವೀಕ್ಷಣೆಗೆ ತಾಲೂಕ ಮಟ್ಟದ ಅಧಿಕಾರಿಗಳ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (Kalyana Karnataka Region Development Board) ಕೆಕೆಆರ್ಡಿಬಿ ಯ ಅಧಿಕಾರಿಗಳ ತಂಡ ಒಂದನ್ನು ರಚನೆ ಮಾಡಲಾಗಿದ್ದು, ಗ್ರಾಮಸ್ಥರಿಂದ ದೂರು ಸಲ್ಲಿಸಿ ಒಂದು ವರ್ಷದ ಬಳಿಕ ಅಧಿಕಾರಿಗಳ ತಂಡ ಗ್ರಾಮಕ್ಕೆ ವೀಕ್ಷಣೆಗೆ ಬಂದಿದ್ದರು.
1 ಕೋಟಿಯ ಅನುದಾನದಲ್ಲಿ ಪೋರ್ಜರಿ ಬಿಲ್ ಹಾಕಲಾಗಿದೆ ಎಂದು ದೃಢವಾಗಿ ಕಂಡು ಬಂದಿದ್ದು, ಕಾಮಗಾರಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಬಿಲ್ಲಿನಲ್ಲಿ ಸುಳ್ಳು ಮಾಹಿತಿ ನೀಡಿರುವುದು ಖಚಿತಪಡಿಸಿದ್ದಾರೆ.
ಈ ವೇಳೆಯಲ್ಲಿ ಗ್ರಾಮದ ಪ್ರಮುಖ ಮುಖಂಡರು ಶ್ರೀಧರಗೌಡ, ಹನುಮಂತಪ್ಪ ಗಿಣಗೇರಾ, ಕಾಶಿಂ ಕೆ ಎನ್, ಮರಿಯಪ್ಪ ಮಳ್ಳಿಕೇರಿ, ಬಸವರಾಜ ಪಾಟೀಲ ಮಂಜುನಾಥ್ ಇಳಿಗೆರ್ ಮತ್ತು ನಾಗರಾಜ್ ಗಾಣದಾಳ, ಮಾರುತಿ ಧನಕನದೊಡ್ಡಿ, ಫಕೀರಪ್ಪ ಹ್ಯಾಟಿ, ಕರಿಯಪ್ಪ ಇಳಿಗೇರ್, ಹನುಮೇಶ್ ತೊಗರಿ, ಮಂಜು ಕಟ್ರಲ್ಲಿ, ಮಹಮದ್ ಅಲಿ ಅರಗಂಜಿ ಸೇರಿದಂತೆ ಇನ್ನು ಅನೇಕ ಗ್ರಾಮಸ್ಥರು ಹಾಜರಾಗಿದ್ದರು.
ಮುಖ್ಯಮಂತ್ರಿಗಳ ಗ್ರಾಮೀಣ ವಿಕಾಸ ಯೋಜನೆ (CMGVP)
ಕರ್ನಾಟಕದ ಒಂದು ಗ್ರಾಮೀಣಾಭಿವೃದ್ಧಿ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ/ಪಂಗಡದ ಜನಸಂಖ್ಯೆ ಹೆಚ್ಚಿರುವ ಗ್ರಾಮಗಳನ್ನು ಆಯ್ಕೆಮಾಡಿ, ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ನೀರು, ನೈರ್ಮಲ್ಯ, ಶಾಲೆ, ವಿದ್ಯುತ್ ಮತ್ತು ಆಶ್ರಯ ಮನೆಗಳ ಅಭಿವೃದ್ಧಿಗೆ ಅನುದಾನ ಒದಗಿಸುವ ಮೂಲಕ ಸಮಗ್ರ ಅಭಿವೃದ್ಧಿ ಸಾಧಿಸುವ ಗುರಿ ಹೊಂದಿದೆ. ಈ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಿರ್ದಿಷ್ಟ ಅನುದಾನ ಬಿಡುಗಡೆ ಮಾಡಲಾಗುತ್ತದೆ ಮತ್ತು ಅನುಷ್ಠಾನಗೊಳಿಸಲಾಗುತ್ತದೆ.
“ನಮ್ಮ ಗ್ರಾಮಕ್ಕೆ ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಒಳಚರಂಡಿ, ಶಾಲೆ, ವಿದ್ಯುತ್ ಮತ್ತು ಆಶ್ರಯ ಮನೆಗಳ ಅಭಿವೃದ್ಧಿಗೆ ಕಾಮಗಾರಿ ಕೂಡ ನಡೆದಿಲ್ಲ, ತುಂಬಾ ಬೇಜಾರಿನ ಸಂಗತಿ ಎಂದರೆ ಈ ಯೋಜನೆ ಅಡಿಯಲ್ಲಿ ಒಂದು ಕೋಟಿ ರೂಪಾಯಿ ಬಿಡುಗಡೆಯಾಗಿತ್ತು, ಇದರಲ್ಲಿ ಪ್ರತಿಶತ 70ರಷ್ಟು ಹಣ ದುರ್ಬಳಿಕೆಯಾಗಿದೆ”