You are currently viewing PV NEWS : ಬೇವೂರಿನಲ್ಲಿ ಚಿಕನ್ ಸೆಂಟರ್‌, ಎಗ್ ರೈಸ್ ಅಂಗಡಿಗಳಿಗೆ ನೋಟಿಸ್ : ಹೆಚ್ಚುವರಿ ದರ ವಸೂಲಿ, ಬೆಲೆಪಟ್ಟಿ ಪ್ರದರ್ಶನ ಮತ್ತು ಸ್ವಚ್ಛತೆ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ! 

PV NEWS : ಬೇವೂರಿನಲ್ಲಿ ಚಿಕನ್ ಸೆಂಟರ್‌, ಎಗ್ ರೈಸ್ ಅಂಗಡಿಗಳಿಗೆ ನೋಟಿಸ್ : ಹೆಚ್ಚುವರಿ ದರ ವಸೂಲಿ, ಬೆಲೆಪಟ್ಟಿ ಪ್ರದರ್ಶನ ಮತ್ತು ಸ್ವಚ್ಛತೆ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ! 

PV NEWS : ಬೇವೂರಿನಲ್ಲಿ ಚಿಕನ್ ಸೆಂಟರ್‌, ಎಗ್ ರೈಸ್ ಅಂಗಡಿಗಳಿಗೆ ನೋಟಿಸ್ : ಹೆಚ್ಚುವರಿ ದರ ವಸೂಲಿ, ಬೆಲೆಪಟ್ಟಿ ಪ್ರದರ್ಶನ ಮತ್ತು ಸ್ವಚ್ಛತೆ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ! 

PV NEWS ಕನ್ನಡ 24×7: 

ಯಲಬುರ್ಗಾ, ಜು. 28, (PV NEWS ಕನ್ನಡ 24×7) : ತಾಲೂಕಿನ ಬೇವೂರು ಗ್ರಾಮದಲ್ಲಿರುವ ಚಿಕನ್ ಸೆಂಟರ್‌, ಎಗ್ ರೈಸ್ ಹಾಗೂ ಇತರೆ ಆಹಾರ ಮಾರಾಟ ಮಳಿಗೆಗಳಲ್ಲಿ ಹೆಚ್ಚುವರಿ ದರ ವಸೂಲಿ, ಬೆಲೆಪಟ್ಟಿ ಪ್ರದರ್ಶಿಸದಿರುವುದು ಹಾಗೂ ಸ್ವಚ್ಛತೆ ಕೊರತೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಂಗಡಿ ಮಾಲೀಕರಿಗೆ ಮಹಾತ್ಮಾ ಗಾಂಧಿ ಬೇವೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ನೋಟಿಸ್ ಜಾರಿಗೊಳಿಸಿದ್ದಾರೆ.

ಯಲಬುರ್ಗಾ–ಕೊಪ್ಪಳ–ಕುಷ್ಟಗಿ ಮುಖ್ಯ ರಸ್ತೆಯಲ್ಲಿರುವ ಬೇವೂರು ಗ್ರಾಮದ ಚಿಕನ್ ಸೆಂಟರ್‌, ಎಗ್ ರೈಸ್ ಹಾಗೂ ಇತರೆ ಆಹಾರ ಮಳಿಗೆಗಳಲ್ಲಿ ಯಲಬುರ್ಗಾ, ಕೊಪ್ಪಳ ಮತ್ತು ಕುಷ್ಟಗಿ ನಗರಗಳಿಗೆ ಹೋಲಿಸಿದರೆ ಹೆಚ್ಚಿನ ದರದಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಹಲವು ಮಳಿಗೆಗಳಲ್ಲಿ ಬೆಲೆಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸದಿರುವುದು ಹಾಗೂ ಅಂಗಡಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡದಿರುವುದು ಕಂಡುಬಂದಿದೆ ಎಂದು ಗ್ರಾಮಸ್ಥರು ಜುಲೈ 28ರಂದು ಗ್ರಾಮ ಪಂಚಾಯಿತಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ದೂರಿಗೆ ತಕ್ಷಣ ಸ್ಪಂದಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006 ಹಾಗೂ ಗ್ರಾಹಕ ಸಂರಕ್ಷಣಾ ಕಾಯ್ದೆ–2019ರ ಅನ್ವಯ ಸಂಬಂಧಿಸಿದ ಅಂಗಡಿ ಮತ್ತು ಹೋಟೆಲ್ ಮಾಲೀಕರಿಗೆ ಸೂಚನಾ ಪತ್ರ ನೀಡಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಿದ್ದಾರೆ.

ನೋಟಿಸ್‌ನಲ್ಲಿ ಮಾರಾಟವಾಗುವ ಎಲ್ಲ ಆಹಾರ ಪದಾರ್ಥಗಳ ದರಪಟ್ಟಿಯನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಗ್ರಾಹಕರಿಗೆ ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ದರಪಟ್ಟಿಯಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಬಾರದು. ಆಹಾರ ತಯಾರಿಕೆ, ಸಂಗ್ರಹಣೆ ಹಾಗೂ ವಿತರಣೆಯಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಅಂಗಡಿ, ಅಡುಗೆಮನೆ, ಪಾತ್ರೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಹಾರದ ತ್ಯಾಜ್ಯವನ್ನು ರಸ್ತೆ, ಚರಂಡಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ನೋಂದಣಿ ಅಥವಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಳಿಗೆಯಲ್ಲಿ ಲಭ್ಯವಿರಿಸಬೇಕು ಎಂದು ಸೂಚಿಸಲಾಗಿದೆ.

ನೋಟಿಸ್ ಸ್ವೀಕರಿಸಿದ ಮೂರು ದಿನಗಳೊಳಗೆ ಮೇಲ್ಕಂಡ ಸೂಚನೆಗಳನ್ನು ಪಾಲಿಸುವಂತೆ ಗಡುವು ನೀಡಲಾಗಿದೆ. ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ ಅಥವಾ ಲೋಪದೋಷಗಳು ಕಂಡುಬಂದರೆ ಆಹಾರ ಸುರಕ್ಷತಾ ಇಲಾಖೆ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ವರದಿ ಸಲ್ಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರ ದೂರಿಗೆ ಗ್ರಾಮ ಪಂಚಾಯಿತಿ ತ್ವರಿತವಾಗಿ ಸ್ಪಂದಿಸಿರುವ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸಿದ್ದು, ಆಹಾರ ಮಳಿಗೆಗಳಲ್ಲಿ ಪಾರದರ್ಶಕ ದರ ವ್ಯವಸ್ಥೆ, ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಯುವ ಹೋರಾಟಗಾರರಾದ ಶೇಖಪ್ಪ ಮರಗಪ್ಪನವರ, ಮುದಕಪ್ಪ ಪೂಜಾರ, ಈರಪ್ಪ ಹಿರೇಮನಿ, ಮುದ್ದಪ್ಪ ಮಣ್ಣಿನವರ, ಉಮೇಶ್ ಓಜೀನಳ್ಳಿ, ನಾಗಪ್ಪ ಕುರಿ, ಲಕ್ಷ್ಮಣ್ಣ ಹಿರೇಮನಿ, ಅರಳಯ್ಯ ಜಾಲಿಗಿಡದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!