PV NEWS : “ಮಕ್ಕಳ ರಕ್ಷಣೆ ಎಲ್ಲರ ಹೊಣೆ; ದೌರ್ಜನ್ಯ ತಡೆಗೆ ಸಮಾಜದ ಸಹಭಾಗಿತ್ವ ಅಗತ್ಯ!” – ನ್ಯಾ. ಎಲ್.ಎಂ. ಪೂಜೇರಿ
PV NEWS ಕನ್ನಡ 24×7:
ಕುಷ್ಟಗಿ, ಆ 22 : ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಅವರ ಮೇಲಿನ ದೌರ್ಜನ್ಯ ತಡೆಗೆ ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮಕ್ಕಳಿಗೆ ತಮ್ಮ ಹಕ್ಕುಗಳು ಹಾಗೂ ರಕ್ಷಣೆಗೆ ಇರುವ ಕಾನೂನುಗಳ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಲ್.ಎಂ. ಪೂಜೇರಿ ಹೇಳಿದರು.
ಪಟ್ಟಣದ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ, ಕುಷ್ಟಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಕುಷ್ಟಗಿ ಪೊಲೀಸ್ ಠಾಣೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ‘ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಶೀರ್ಷಿಕೆಯಡಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಎಲ್.ಎಂ. ಪೂಜೇರಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪೋಕ್ಸೋ ಕಾಯ್ದೆ–2012ರ ಕುರಿತು ಜನಜಾಗೃತಿ, ಕಾನೂನು ನೆರವು ಹಾಗೂ ಪೋಕ್ಸೋ ಪ್ರಕರಣಗಳಿಂದ ಬಾಧಿತ ಕುಟುಂಬಗಳ ಅನುಭವಗಳ ಕುರಿತು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು.
ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಡಾ. ರಾಘವೇಂದ್ರ ಭಟ್ ಮಾತನಾಡಿ, ಮಕ್ಕಳಿಗೆ ದೊರೆಯುವ ಕಾನೂನು ರಕ್ಷಣೆ, ಮಕ್ಕಳ ಮೇಲಿನ ದೌರ್ಜನ್ಯವನ್ನು ಗುರುತಿಸುವ ವಿಧಾನ ಹಾಗೂ ಇಂತಹ ಸಂದರ್ಭಗಳಲ್ಲಿ ಪೋಷಕರು ಮತ್ತು ಸಾರ್ವಜನಿಕರು ವಹಿಸಬೇಕಾದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.
ಪೋಕ್ಸೋ ಪ್ರಕರಣಗಳ ಬಾಧಿತ ಕುಟುಂಬಗಳ ಕಥನಗಳ ವಿಶ್ಲೇಷಣೆ ಕುರಿತು ಡಾ. ಜೀವನ್ ಸಾಬ್ ವಾಲಿಕಾರ್ ಬಿನ್ನಾಳ ಮಾತನಾಡಿ, ಇಂತಹ ಪ್ರಕರಣಗಳಿಂದ ಮಕ್ಕಳು ಹಾಗೂ ಅವರ ಕುಟುಂಬಗಳ ಮೇಲೆ ಉಂಟಾಗುವ ಸಾಮಾಜಿಕ ಮತ್ತು ಮಾನಸಿಕ ಪರಿಣಾಮಗಳ ಕುರಿತು ವಿವರಿಸಿದರು. ಬಾಧಿತ ಮಕ್ಕಳಿಗೆ ಕಾನೂನು ನೆರವಿನ ಜತೆಗೆ ಅಗತ್ಯ ಬೆಂಬಲ ಮತ್ತು ರಕ್ಷಣೆ ಒದಗಿಸುವ ಮಹತ್ವವನ್ನು ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಕುರಿತು ಪೊಲೀಸ್ ವೃತ್ತ ನಿರೀಕ್ಷಕ ವಿಶ್ವನಾಥ್ ಹಿರೇಗೌಡ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ದೂರು ಸ್ವೀಕಾರ, ತನಿಖೆ ಹಾಗೂ ಸಂತ್ರಸ್ತ ಮಕ್ಕಳೊಂದಿಗೆ ಪೊಲೀಸರು ಸೂಕ್ಷ್ಮವಾಗಿ ನಡೆದುಕೊಳ್ಳಬೇಕಾದ ಅಗತ್ಯದ ಕುರಿತು ಮಾಹಿತಿ ನೀಡಿದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಕೇವಲ ಕಾನೂನು ಕ್ರಮಗಳು ಸಾಕಾಗುವುದಿಲ್ಲ. ಪೋಷಕರು, ಶಿಕ್ಷಕರು, ಪೊಲೀಸ್ ಇಲಾಖೆ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂಬ ಸಂದೇಶ ಕಾರ್ಯಕ್ರಮದಲ್ಲಿ ಮೂಡಿಬಂತು.
ಮಕ್ಕಳ ಹಕ್ಕುಗಳ ಕುರಿತು ನಿರಂತರ ಜಾಗೃತಿ ಮೂಡಿಸುವುದು ಹಾಗೂ ಯಾವುದೇ ರೀತಿಯ ದೌರ್ಜನ್ಯ ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಕಾನೂನು ನೆರವು ಪಡೆಯುವುದು ಅಗತ್ಯ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಶೋಕ ಶಿಗ್ಗಾವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಲ್ಲಮ್ಮ ಹಂಡಿ ಉಪಸ್ಥಿತರಿದ್ದರು.