PV NEWS : ಯಲಬುರ್ಗಾ | ಕುಡಗುಂಟಿಯ ಶಿವ ಶರಣಯ್ಯಗೆ ‘ಗಾನವಿಶಾರದ’ ಪ್ರಶಸ್ತಿ!
PV NEWS ಕನ್ನಡ 24×7:
ಯಲಬುರ್ಗಾ, ಆ. 22: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಯಲಬುರ್ಗಾ ತಾಲ್ಲೂಕಿನ ಕುಡಗುಂಟಿ ಗ್ರಾಮದ ಯುವ ಗಾಯಕ ಶಿವ ಶರಣಯ್ಯ ಮ್ಯಾಗಳಮಠ ಅವರಿಗೆ ‘ಗಾನವಿಶಾರದ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿವ ಶರಣಯ್ಯ ಅವರು ತಮ್ಮ ಗಾಯನದ ಮೂಲಕ ರಾಜ್ಯದ ವಿವಿಧೆಡೆ ಗಮನ ಸೆಳೆದಿದ್ದಾರೆ. ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಗಾಯನ ಕಾರ್ಯಕ್ರಮ ನೀಡುತ್ತಿದ್ದು, ಗ್ರಾಮೀಣ ಭಾಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈಗಾಗಲೇ ವಿವಿಧ ಸಂಘ–ಸಂಸ್ಥೆಗಳಿಂದ ಹಲವು ಪ್ರಶಸ್ತಿ ಹಾಗೂ ಗೌರವಗಳನ್ನು ಪಡೆದಿರುವ ಅವರಿಗೆ ಮುಂದಿನ ದಿನಗಳಲ್ಲಿ ಸರ್ಕಾರದ ರಾಜ್ಯಮಟ್ಟದ ಪ್ರಶಸ್ತಿ ದೊರೆಯಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ. ಇಂತಹ ಗೌರವಗಳು ಕಲಾವಿದರ ಕಲಾ ಸೇವೆಗೆ ಮತ್ತಷ್ಟು ಉತ್ತೇಜನ ನೀಡಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಶಿವ ಶರಣಯ್ಯ ಅವರಿಗೆ ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷ ಶಶಿಧರ್ ಹೊಸಮನಿ, ಯಲಬುರ್ಗಾ ತಾಲ್ಲೂಕು ಸರ್ಕಾರಿ ಆಹಾರ ಪಡಿತರ ಚೀಟಿ ವಿತರಕರ ಸಂಘದ ಅಧ್ಯಕ್ಷ ಛತ್ರಪ್ಪ ಚಲವಾದಿ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಶಂಕರ್ ಜಕ್ಕಲಿ, ವ್ಯಾಪಾರಿ ರಮೇಶ್ ಪಟೇದ, ಸಿದ್ಲಿಂಗಪ್ಪ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.