“ಮಾನವ ಕಳ್ಳ ಸಾಗಣೆ ತಡೆ ದಿನ” : ಪಿಡಿಓ, ಶಾಲಾ ಅಧ್ಯಾಪಕರಿಗೆ ಜಾಗೃತಿ ಕಾರ್ಯಕ್ರಮ

You are currently viewing “ಮಾನವ ಕಳ್ಳ ಸಾಗಣೆ ತಡೆ ದಿನ” : ಪಿಡಿಓ, ಶಾಲಾ ಅಧ್ಯಾಪಕರಿಗೆ ಜಾಗೃತಿ ಕಾರ್ಯಕ್ರಮ

ಕೊಪ್ಪಳ : ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಹಾಗೂ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸರಕಾರಿ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಜಾಗೃತಿ ಕಾರ್ಯಕ್ರಮ ಆಗಸ್ಟ್ 11ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬ್ರೈಟ್ ಇಂಡಿಯಾ ಸೊಸೈಟಿ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಾನವ ಕಳ್ಳ ಸಾಗಣೆ ಎಂಬುದು ಅತೀ ದೊಡ್ಡ ಅಕ್ರಮ ಜಾಲವಾಗಿದ್ದು, ಅತಿ ಹೆಚ್ಚಿನ ಅವ್ಯವಹಾರದ ವೃತ್ತಿಯಾಗಿದೆ. ಈ ಜಾಲದಲ್ಲಿ ಸಿಲುಕಿದ ವ್ಯಕ್ತಿಯನ್ನು ಅತೀ ಶೀಘ್ರದಲ್ಲಿಯೇ ಪತ್ತೆ ಹಚ್ಚದಿದ್ದಲ್ಲಿ ನಂತರದಲ್ಲಿ ಪತ್ತೆ ಹಚ್ಚಲು ಅಸಾಧ್ಯ. ಈ ಪಿಡುಗಿಗೆ ಕೊಪ್ಪಳ ಜಿಲ್ಲೆಯೂ ಹೊರತಾಗಿಲ್ಲ. ಜಿಲ್ಲೆಯಲ್ಲಿ ದಾಖಲಾಗಿರುವ ಮಕ್ಕಳ ಮತ್ತು ಮಹಿಳೆಯರ ಸಾಗಣೆ ಪ್ರಕರಣ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಸಾಗಾಣಿಕೆ ಮಾಡಿದ್ದು ಮತ್ತು ಬೇರೆ ರಾಜ್ಯ ಮತ್ತು ಜಿಲ್ಲೆಯಿಂದ ಕರೆದುಕೊಂಡು ಬಂದಿದ್ದು ಕಂಡುಬರುತ್ತದೆ. ಆದ್ದರಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಣೆ ತಡೆ ಮತ್ತು ರಕ್ಷಣಾ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾಗಿರುವ ಅವಶ್ಯಕತೆಯಿದೆ ಎಂದರು.

ಶಾಲಾ ಶಿಕ್ಷಕರು, ಮುಖ್ಯಾಧ್ಯಾಪಕರು ಮಕ್ಕಳ ಮೇಲೆ ಲೈಂಗಿಕ ಅಪರಾಧಗಳನ್ನು ಎಸಗಿದ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಮಕ್ಕಳ ಸುರಕ್ಷತಾ ನೀತಿ-2016ರನ್ನು ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲೂ ಕಡ್ಡಾಯ ಅನುಷ್ಠಾನಗೊಳಿಸಬೇಕಾಗಿದೆ. ಜಿಲ್ಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಾಲ್ಯವಿವಾಹ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಹಾಗೂ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿರುವ ಉದಾಹರಣೆ ಜಿಲ್ಲೆಯಲ್ಲಿ ವರದಿಯಾಗಿದೆ.

ಕಳೆದ 10 ವರ್ಷಗಳಿಂದ ನಿರಂತರವಾಗಿ ಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನು ಆಯೋಜಿಸಿದ ಹೆಗ್ಗಳಿಕೆ ಕೊಪ್ಪಳ ಜಿಲ್ಲೆಯದ್ದು. ಮೀಷನ್ ವಾತ್ಸಲ್ಯದ ಅನುಷ್ಠಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಗ್ರಾಮ ಪಂಚಾಯತ್‌ಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಘನತೆಯಿಂದ ಜೀವಿಸುವ ಹಕ್ಕನ್ನು ನಮ್ಮ ಸಂವಿಧಾನವು ದಯಪಾಲಿಸಿದೆ. ನಿಮ್ಮ ವ್ಯಾಪ್ತಿಯ ಯಾವುದೇ ಪೋಷಣೆ ಮತ್ತು ರಕ್ಷಣೆಯ ಅವಶ್ಯವಿರುವ ಮಗುವು ಕಂಡುಬಂದಲ್ಲಿ ಈ ಮೀಷನ್ ವಾತ್ಸಲ್ಯ ಯೋಜನೆಯಡಿಯಲ್ಲಿ ಲಭ್ಯವಿರುವ ಸಾಂಸ್ಥಿಕ ಸೇವೆ (ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ, ದತ್ತು ಕೇಂದ್ರ) ಅಸಾಂಸ್ಥಿಕ ಸೇವೆಗಳಾದ ದತ್ತು ಕಾರ್ಯಕ್ರಮ, ಪೋಷಕತ್ವ, ಪ್ರಾಯೋಜಕತ್ವ, ವಿಶೇಷ ಪಾಲನಾ ಯೋಜನೆ, ಉಪಕಾರ ಯೋಜನೆಯ ಸೇವೆಗಳನ್ನು ಒದಗಿಸುವ ಮೂಲಕ ಮಕ್ಕಳ ಸಂರಕ್ಷಣೆಯನ್ನು ಮಾಡಬಹುದಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಶಿಕ್ಷಣ ಇಲಾಖೆ, ಮುಖ್ಯೋಪಾಧ್ಯಾಯರುಗಳ ಪಾತ್ರವು ಅತ್ಯಂತ ಪ್ರಮುಖವಾದದ್ದಾಗಿದೆ.

ಮಕ್ಕಳಿಗೆ ಅವರುಗಳ ಹಕ್ಕುಗಳನ್ನು ಮಕ್ಕಳ ಕ್ಲಬ್‌ಗಳನ್ನು ರಚಿಸಿ ಅನುಷ್ಠಾನಗೊಳಿಸಿರುವ ಮೂಲಕ, ಮಕ್ಕಳ ಪರವಾದ ಕಾನೂನುಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯವಾಗುತ್ತಿದೆ. ಕರ್ನಾಟಕ ರಾಜ್ಯ ಸರಕಾರವು ಮಕ್ಕಳ ರಕ್ಷಣೆಗೆ ಅನುಷ್ಠಾನಗೊಳಿಸಿರುವ ಮಕ್ಕಳ ಸುರಕ್ಷತಾ ನೀತಿ-2016ಯನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸುವ ಮಕ್ಕಳ ಸ್ನೇಹಿ ಶೈಕ್ಷಣಿಕ ಸಂಸ್ಥೆಗಳನ್ನಾಗಿಸುವದರೊಂದಿಗೆ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಮಲ್ಲಪ್ಪ ಕೆ ತೊದಲಬಾಗಿ ಮಾತನಾಡಿ, ಮಗುವಿನ ಪ್ರಗತಿಯಲ್ಲಿ, ತಂದೆ-ತಾಯಿ ಅಥವಾ ಪೋಷಕರು, ಶಿಕ್ಷಕರು, ಮೂಲ ಭೂತ ಸೌಲಭ್ಯಕಲ್ಪಿಸುವ ಅಧಿಕಾರಿಗಳು ಹಾಗೂ ರಕ್ಷಣೆ ನೀಡುವ ಪೊಲೀಸರುಗಳ ಪಾತ್ರ ಪ್ರಮುಖವಾಗಿದೆ. ಮಗುವಿನ ದೇಹ ಮತ್ತು ಮನಸ್ಸಿನಲ್ಲಿರುವಂತಹ ಅತ್ಯುತ್ತಮವಾದ ಅಂಶಗಳನ್ನು ಹೊರತೆಗೆಯುವಂತಹ ಕಾರ್ಯವನ್ನು ಶಿಕ್ಷಕರು ಮಾಡಿದರೇ, ಮೂಲ ಭೂತ ಸೌಲಭ್ಯಕಲ್ಪಿಸುವಂತಹ ಹೊಣೆ ಪಿಡಿಓಗಳ ಮೇಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಪರವಾದ ಕಾಯ್ದೆಗಳ ಬಗ್ಗೆ ಮುಖ್ಯೋಪಾಧ್ಯಾಯರು ಮತ್ತು ಪಿಡಿಓಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತರಬೇತಿಯ ಸದುಪಯೋಗಪಡೆದುಕೊಂಡು ಮಕ್ಕಳ ರಕ್ಷಣೆಗೆ ಶ್ರಮೀಸಬೇಕು ಎಂದರು.

ಪೋಸ್ಟರ್ ಬಿಡುಗಡೆ

ದೇಹದ ಮೇಲಿನ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುವ ಕುರಿತಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಹೊರತಂದ ಪೋಸ್ಟರ್‌ಗಳನ್ನು ಇದೆ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಮೀಷನ್ ವಾತ್ಸಲ್ಯ ಮಾಹಿತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಕೊಪ್ಪಳದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಹೊರತರಲಾದ “ಮೀಷನ್ ವಾತ್ಸಲ್ಯ”ಕುರಿತಾದ ಮಾಹಿತಿ ಫಲಕಗಳನ್ನು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ಮುಂಭಾಗದಲ್ಲಿ ಅನಾವರಣಗೊಳಿಸುವ ಮೂಲಕ ಮಿಷನ್ ವಾತ್ಸಲ್ಯ ಮಾಹಿತಿ ಪ್ರಸಾರ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಗಂಗಪ್ಪ, ಶಿಕ್ಷಣ ಇಲಾಖೆಯ ಜಿಲ್ಲಾ ಸಮನ್ವಯಾಧಿಕಾರಿಗಳಾದ ಉಮೇಶ ಪೂಜಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರೋಹಿಣಿ ಕೊಟಗಾರ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕರಾದ ರಾಘವೇಂದ್ರ ಭಟ್, ಯುನಿಸೆಫ್ ವ್ಯವಸ್ಥಾಪಕರಾದ ಹರೀಶ್ ಜ್ಯೋಗಿ, ಸಿಪಿಐ ಸಂತೋಷ ಹಳ್ಳೂರು, ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಜಯಶ್ರೀ ಅರಕೇರಿ, ಬ್ರೈಟ್ ಸಂಸ್ಥೆಯ ಕಾರ್ಯದರ್ಶಿ ಸದಾಶಿವ ಕಾಂಬ್ಳೆ ಸೇರಿದಂತೆ ಮತ್ತಿತರರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿ ಪವಾರ ನಿರೂಪಿಸಿದರು. ಯಲಬುರ್ಗಾ ಶಿಶಿ ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಂಧು ಯಲಿಗಾರ ವಂದಿಸಿದರು.

ತರಬೇತಿ ಕಾರ್ಯಕ್ರಮ

ವೇದಿಕೆ ಕಾರ್ಯಕ್ರಮ ಬಳಿಕ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕರಾದ ರಾಘವೇಂದ್ರ ಭಟ್ ಮತ್ತು ಯುನಿಸೆಫ್ ವ್ಯವಸ್ಥಾಪಕರಾದ ಹರೀಶ್ ಜ್ಯೋಗಿ ಅವರು ಮುಖ್ಯೋಪಾಧ್ಯಾಯರು ಹಾಗೂ ಪಿಡಿಓಗಳಿಗೆ ವಿವಿಧ‌‌ ವಿಷಯಗಳ ಬಗ್ಗೆ ಸವಿವರವಾದ ತರಬೇತಿ ನೀಡಿದರು.

Leave a Reply

error: Content is protected !!