You are currently viewing PV NEWS : ‘ಓದದ ಮೂರು ವರ್ಷದ ಫೀಸ್ ಏಕೆ?’ — ಮೂಲ ದಾಖಲೆಗಳಿಗಾಗಿ ಕಾನೂನು ಕಾಲೇಜು ಎದುರು ವಿದ್ಯಾರ್ಥಿಯ ಏಕಾಂಗಿ ಉಪವಾಸ!

PV NEWS : ‘ಓದದ ಮೂರು ವರ್ಷದ ಫೀಸ್ ಏಕೆ?’ — ಮೂಲ ದಾಖಲೆಗಳಿಗಾಗಿ ಕಾನೂನು ಕಾಲೇಜು ಎದುರು ವಿದ್ಯಾರ್ಥಿಯ ಏಕಾಂಗಿ ಉಪವಾಸ!

PV NEWS : ‘ಓದದ ಮೂರು ವರ್ಷದ ಫೀಸ್ ಏಕೆ?’ — ಮೂಲ ದಾಖಲೆಗಳಿಗಾಗಿ ಕಾನೂನು ಕಾಲೇಜು ಎದುರು ವಿದ್ಯಾರ್ಥಿಯ ಏಕಾಂಗಿ ಉಪವಾಸ!

 

ಅಟಲ್ ಬಿಹಾರಿ ವಾಜಪೇಯಿ ಕಾನೂನು ಕಾಲೇಜು ಎದುರು ಹಳೇ ವಿದ್ಯಾರ್ಥಿಯಿಂದ ಏಕಾಂಗಿ ಉಪವಾಸ ಸತ್ಯಾಗ್ರಹ

ಕೊಪ್ಪಳ, ಆ. 22: ವಿದ್ಯಾರ್ಥಿಗಳು ಕಾನೂನು ಪದವಿಗೆ ಪ್ರವೇಶ ಪಡೆದು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಮೂಲ ದಾಖಲೆಗಳನ್ನು ವಾಪಸ್ ನೀಡಲು ಮೂರು ವರ್ಷದ ಸಂಪೂರ್ಣ ಶುಲ್ಕ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆರೋಪ ಕೊಪ್ಪಳದ ಅಟಲ್ ಬಿಹಾರಿ ವಾಜಪೇಯಿ ಕಾನೂನು ಕಾಲೇಜಿನ ವಿರುದ್ಧ ಕೇಳಿಬಂದಿದೆ.

ಈ ಆರೋಪದ ಹಿನ್ನೆಲೆಯಲ್ಲಿ ಕಾಲೇಜಿನ ಹಳೇ ವಿದ್ಯಾರ್ಥಿ ಎಂ.ಕೆ. ಸಾಹೇಬ್ ನಾಗೇಶನಹಳ್ಳಿ ಅವರು ದಾಖಲೆಗಳನ್ನು ವಾಪಸ್ ನೀಡುವಂತೆ ಆಗ್ರಹಿಸಿ ಕಾಲೇಜಿನ ಎದುರು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ವಿದ್ಯಾರ್ಥಿಗಳ ಆರೋಪದ ಪ್ರಕಾರ, ಎಲ್‌ಎಲ್‌ಬಿ ಪದವಿಗೆ ಮೊದಲ ವರ್ಷದ ಪ್ರವೇಶ ಪಡೆದು ಒಂದು ಅಥವಾ ಎರಡು ಸೆಮಿಸ್ಟರ್‌ಗಳ ಬಳಿಕ ವಿದ್ಯಾಭ್ಯಾಸ ಮುಂದುವರಿಸಲಾಗದ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ವಾಪಸ್ ನೀಡಲು ಕಾಲೇಜು ಆಡಳಿತವು ಮೂರು ವರ್ಷದ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದೆ. ಇದರಿಂದ ಈಗಾಗಲೇ ವಿದ್ಯಾಭ್ಯಾಸ ಸ್ಥಗಿತಗೊಳಿಸಿರುವ ಹಲವು ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ಪಡೆಯಲು ಪರದಾಡುವಂತಾಗಿದೆ ಎನ್ನಲಾಗಿದೆ.

ಮೂರು ವರ್ಷದ ಶುಲ್ಕ ಏಕೆ ಪಾವತಿಸಬೇಕು?

ಧರಣಿ ನಿರತ ಎಂ.ಕೆ. ಸಾಹೇಬ್ ನಾಗೇಶನಹಳ್ಳಿ ಮಾತನಾಡಿ, “ನಾನು 2022ರಲ್ಲಿ ಎಲ್‌ಎಲ್‌ಬಿ ಪದವಿಗೆ ಪ್ರವೇಶ ಪಡೆದಿದ್ದೆ. ಮೊದಲ ಸೆಮಿಸ್ಟರ್ ಪರೀಕ್ಷೆ ಬರೆದ ಬಳಿಕ ಕಾರಣಾಂತರಗಳಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದೆ. ಇದೀಗ ಬೇರೆ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಮುಂದುವರಿಸಲು ಪ್ರವೇಶ ಪಡೆದಿದ್ದೇನೆ. ಹೀಗಾಗಿ 2022ರಲ್ಲಿ ಕಾಲೇಜಿಗೆ ಸಲ್ಲಿಸಿದ್ದ ಮೂಲ ದಾಖಲೆಗಳನ್ನು ವಾಪಸ್ ನೀಡುವಂತೆ ಕೇಳಿದರೂ, ಮೂರು ವರ್ಷದ ಸಂಪೂರ್ಣ ಶುಲ್ಕ ಪಾವತಿಸಿದ ಬಳಿಕವೇ ದಾಖಲೆಗಳನ್ನು ನೀಡುವುದಾಗಿ ಹೇಳುತ್ತಿದ್ದಾರೆ” ಎಂದು ಆರೋಪಿಸಿದರು.

“ನಾನು ಒಂದು ಸೆಮಿಸ್ಟರ್ ಮಾತ್ರ ವಿದ್ಯಾಭ್ಯಾಸ ಮಾಡಿದ್ದು, ಆ ಅವಧಿಗೆ ಸಂಬಂಧಿಸಿದ ಶುಲ್ಕವನ್ನು ಪಾವತಿಸಲು ಸಿದ್ಧನಿದ್ದೇನೆ. ಆದರೆ ವಿದ್ಯಾಭ್ಯಾಸ ಮಾಡದ ಮೂರು ವರ್ಷಗಳ ಶುಲ್ಕವನ್ನು ಏಕೆ ಪಾವತಿಸಬೇಕು?” ಎಂದು ಅವರು ಪ್ರಶ್ನಿಸಿದರು.

ಬೇರೆ ಕಾಲೇಜಿನ ಪ್ರವೇಶಕ್ಕೂ ದಾಖಲೆಗಳ ಅಡ್ಡಿ

“2023-24ರಲ್ಲಿ ಕೇರಳ ರಾಜ್ಯ ಸರ್ಕಾರದ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ದಾಖಲೆ ಪರಿಶೀಲನೆಗೆ ತೆರಳಿದ್ದೆ. ಆದರೆ ಮೂಲ ಅಂಕಪಟ್ಟಿಗಳು ಸೇರಿದಂತೆ ಅಗತ್ಯ ದಾಖಲೆಗಳು ಲಭ್ಯವಾಗದ ಕಾರಣ ಅಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದಲ್ಲಿ ಉತ್ತೀರ್ಣನಾಗಿ ಎಲ್‌ಎಲ್‌ಬಿಗೆ ಪ್ರವೇಶ ಪಡೆದಿದ್ದೇನೆ. ಅಲ್ಲಿ ಮೂಲ ಅಂಕಪಟ್ಟಿಗಳನ್ನು ಸಲ್ಲಿಸಬೇಕಾಗಿದೆ. ಆದರೆ ಇಲ್ಲಿನ ಕಾಲೇಜು ಆಡಳಿತವು ಮೂರು ವರ್ಷದ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದೆ” ಎಂದು ಸಾಹೇಬ್ ದೂರಿದರು.

“ನ್ಯಾಯ ಸಿಗುವವರೆಗೂ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ. ನನ್ನ ಮೂಲ ದಾಖಲೆಗಳನ್ನು ವಾಪಸ್ ನೀಡಬೇಕು” ಎಂದು ಅವರು ಪಟ್ಟು ಹಿಡಿದಿದ್ದಾರೆ.

ಪ್ರಾಂಶುಪಾಲರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ

ಈ ವಿಚಾರವನ್ನು ಕಾಲೇಜಿನ ಪ್ರಾಂಶುಪಾಲರಾದ ಉಷಾದೇವಿ ಅವರ ಗಮನಕ್ಕೂ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಂ.ಕೆ. ಸಾಹೇಬ್ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಮೂಲ ದಾಖಲೆಗಳ ವಾಪಸಾತಿಗೆ ಸಂಬಂಧಿಸಿದ ಶುಲ್ಕದ ನಿಯಮಗಳು, ಕಾಲೇಜಿನ ಆಡಳಿತಾತ್ಮಕ ಕ್ರಮ ಹಾಗೂ ವಿದ್ಯಾರ್ಥಿಯ ಆರೋಪಗಳ ಕುರಿತು ಕಾಲೇಜು ಆಡಳಿತದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಬೇಕಿದೆ. ಈ ಕುರಿತು ಸಂಬಂಧಿಸಿದ ಶಿಕ್ಷಣ ಹಾಗೂ ಕಾನೂನು ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

Prajavikshane

Chandru R Bhanapaur

Leave a Reply

error: Content is protected !!