PV NEWS : ಕುಕನೂರಿನಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಉದ್ಘಾಟನೆ!
‘ನಮ್ಮ ಅಂಗನವಾಡಿ, ನಮ್ಮದೇ ಜವಾಬ್ದಾರಿ’ ಧ್ಯೇಯವಾಕ್ಯದಡಿ ಕಾರ್ಯಕ್ರಮ
PV NEWS ಕನ್ನಡ 24×7:
ಕುಕನೂರು, ಸೆ. 10: ಪಟ್ಟಣದ 3ನೇ ಅಂಗನವಾಡಿ ಕೇಂದ್ರದಲ್ಲಿ 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ–2026ರ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.
ಇಲಾಖೆಯ ಹಿರಿಯ ಮೇಲ್ವಿಚಾರಕಿ ಜಯಲಕ್ಷ್ಮಿ ಮೆಣಸಿನಕಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಜೀಮ್ ಪ್ರೇಮ್‌ಜಿ ಫೌಂಡೇಷನ್‌ನ ಗುರುರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಯಲಕ್ಷ್ಮಿ ಮೆಣಸಿನಕಾಯಿ, ‘ಭಾರತ ಸರ್ಕಾರವು 2018ರ ಮಾರ್ಚ್‌ನಲ್ಲಿ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಿದ್ದು, ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಪೋಷಣ್ ಮಾಸಾಚರಣೆ ಮೂಲಕ ಪೋಷಣೆ, ಆರೋಗ್ಯ ಹಾಗೂ ಮಕ್ಕಳ ರಕ್ಷಣೆಯ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
‘ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವುದು ಪೋಷಣ್ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಗರ್ಭಧಾರಣೆಯಿಂದ ಮಗುವಿನ ಆರಂಭಿಕ ಬೆಳವಣಿಗೆಯ ಅವಧಿಯ 1,000 ದಿನಗಳು ಅತ್ಯಂತ ಮಹತ್ವದ್ದಾಗಿದ್ದು, ಈ ಅವಧಿಯಲ್ಲಿ ತಾಯಿ ಮತ್ತು ಮಗುವಿಗೆ ಪೌಷ್ಟಿಕ ಆಹಾರ, ಆರೋಗ್ಯ ಸೇವೆ ಹಾಗೂ ಸೂಕ್ತ ಆರೈಕೆ ದೊರೆಯಬೇಕು’ ಎಂದು ಅವರು ತಿಳಿಸಿದರು.
ಈ ಬಾರಿಯ 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆಯನ್ನು ‘ನಮ್ಮ ಅಂಗನವಾಡಿ, ನಮ್ಮದೇ ಜವಾಬ್ದಾರಿ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮೇಲ್ವಿಚಾರಕಿ ಮಂಜುಳಾ ಗುಗ್ಗರಿ ನಿರೂಪಿಸಿದರು. ಮೇಲ್ವಿಚಾರಕಿ ಪದ್ಮಾವತಿ, ಪೋಷಣ್ ಸಿಬ್ಬಂದಿ ವಿರೂಪಾಕ್ಷಯ್ಯ ಕಟಗಿ, ಅಂಗನವಾಡಿ ಕಾರ್ಯಕರ್ತೆ ಚೆನ್ನಮ್ಮ ನಾಗಣ್ಣವರ ಸೇರಿದಂತೆ ಇಲಾಖೆಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.