LOCAL NEWS : ದಾನ ಧರ್ಮ,ಜನಸೇವೆ,ಪರಸ್ಪರ ವಿಶ್ವಾಸವೇ ಜಗತ್ತಿನಲ್ಲಿ ಶಾಶ್ವತ : ಮಹಾದೇವ ಮಹಾಸ್ವಾಮಿಗಳು
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು ಫೆ. 17 : ಎಷ್ಟೇ ಹಣ ಅಂತಸ್ತುಗಳಿದ್ದರು ಸಹ ದಾನ, ಧರ್ಮ, ಪರಸ್ಪರ ಪ್ರೀತಿ ವಿಶ್ವಾಸಗಳೇ ಜಗತ್ತಿನಲ್ಲಿ ಶಾಶ್ವತ ಎಂದು ಅನ್ನದಾನೇಶ್ವರ ಮಠದ ಮಹಾದೇವ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಮಂಡಲಗಿರಿ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿಯ ಪಂಚ ಕಳಸ ಮಹಾ ರಥೋತ್ಸವ ಸಂದರ್ಭದಲ್ಲಿ ವೇದಿಕೆಯನ್ನು ಉದ್ದೇಶಿಸಿ ಕುಕನೂರು ಅನ್ನದಾನೀಶ್ವರ ಶಾಖಾಮಠದ ಪೂಜ್ಯರಾದ ಡಾಕ್ಟರ ಮಹಾದೇವ ಮಹಾಸ್ವಾಮಿಗಳು ಮಾತನಾಡುತ್ತ ಜಗತ್ತಿನಲ್ಲಿ ಜನರ ವಿಶ್ವಾಸ ಗಳಿಸುವುದು ಬಹುಮತವಾಗಿದ್ದು ಪರಸ್ಪರ ಪ್ರೀತಿ-ವಿಶ್ವಾಸ ದಾನ ಧರ್ಮಗಳೆ ಜಗತ್ತಿನಲ್ಲಿ ಶಾಶ್ವತವಾಗಿದ್ದು ಯಾವುದೇ ಸಿರಿ ಸಂಪತ್ತುಗಳಲ್ಲ ಹಾಗೂ ಕೊಡುವ ಮತ್ತು ಮಾಡುವ ಕೈಗಳು ಉತ್ತಮವಾಗಿದ್ದರೆ ಜಗತ್ತೇ ಅಭಿವೃದ್ಧಿಗೊಳ್ಳುವುದರಲ್ಲಿ ಅನುಮಾನವಿಲ್ಲ. ಮಂಡಲಗಿರಿ ಗ್ರಾಮ ವೈವಿಧ್ಯಮಯ ಕಾರ್ಯಾಗಳಿಗೆ ಸಾಕ್ಷಿಯಾಗಿದ್ದು ಜಾತ್ರಾ ಮಹೋತ್ಸವದ ನಿಮಿತ್ಯ ಕೈಗೊಂಡಿರುವ ನೋಡಿದಾಗ ಇಲ್ಲಿ ಉತ್ತಮ ಕೈಗಳೇ ಇರುವುದು ಸಾಕ್ಷಿಯಾಗಿದೆ ಎಂದು ಹೇಳಿದರು
ಜಾತ್ರಾ ಮಹೋತ್ಸವದ ಪ್ರಯುಕ್ತ ಫೆಬ್ರವರಿ 08 ರಿಂದ ಗ್ರಾಮದಲ್ಲಿ ಲಘು ರಥೋತ್ಸವದ ಗಾಲಿ ಗಳನ್ನು ಹೊರತರುವುದರೊಂದಿಗೆ ಪ್ರಾರಂಭವಾದ ಧಾರ್ಮಿಕ ಚಟುವಟಿಕೆಗಳು ಮಂಗಳವಾರ ಪಂಚಕಳಸಮಹಾ ರಥೋತ್ಸವ ಜರಗಿತು. ರಥೋತ್ಸವದ ದಿನ ಪ್ರಾತಃಕಾಲದಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆದವು. ಬೆಳಿಗ್ಗೆ ಎಂಟು ಗಂಟೆಯ ವೇಳೆಗೆ ಗ್ರಾಮದ ವಿಶ್ವಕರ್ಮ ಸಮಾಜದವರ ಮನೆ ಯಿಂದ ಕಳಸ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀವೀರಭದ್ರೇಶ್ವರ ದೇವಸ್ಥಾನಕ್ಕೆ ತರಲಾಯಿತು.
ಈ ವೇಳೆಯಲ್ಲಿ ಗ್ರಾಮದ ಮುತ್ತೈದೆಯರು ಕಳಸಕ್ಕೆ ಆರತಿ ಮಾಡಿ ಹೂವಿನ ಹಾರ ಹಾಕಿ ಪೂಜೆ ಮಾಡುವುದರೊಂದಿಗೆ ಸ್ವಾಗತಿಸಿಕೊಂಡರು.
ಸಂಜೆ ವೇಳೆಗೆ ಹತ್ತಿರದ ಗೊರಲೆಕೊಪ್ಪ ಗ್ರಾಮ ದಿಂದ ನಂದಿಕೋಲು ಸೇವೆ ಹಾಗೂ ಪಕ್ಕದ ಬಟಪನಹಳ್ಳಿ ಗ್ರಾಮದಿಂದ ತೇರಿನ ಹಗ್ಗದ ಸೇವೆ ಆಗಮಿಸಿದ ನಂತರ ನಂದಿಧ್ವಜ ಲೀಲಾವು ನಡೆಸಿ ಪಂಚಕಳಸ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಂಸ್ಥಾನ ನಗರಗಡ್ಡಿ ಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಧ್ವಜಾರೋಹಣ ಮಾಡಿದರು, ಕುಕನೂರು ಪಟ್ಟಣದ ಮುಂಡರಗಿ ಶ್ರೀ ಅನ್ನದಾನೀಶ್ವರ ಶಾಖಾ ಮಠದ ಪೂಜ್ಯರಾದ ಮಹಾದೇವ ಮಹಾಸ್ವಾಮಿಗಳು ಪಂಚ ಕಳಸ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಮಂಡಲಗಿರಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಾಗೂ ನೆರೆ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಮಹಾ ರಥೋತ್ಸವ ಸಂದರ್ಭದಲ್ಲಿ ಪಾಲ್ಗೊಂಡು ಶ್ರೀವೀರಭದ್ರೇಶ್ವರನಿಗೆ ತಮ್ಮ ಹರಕೆ, ಇಷ್ಟಾರ್ಥ ಗಳನ್ನು ನೆರವೇರಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಮಹಾರಥೋತ್ಸವದ ದಿನ ಗ್ರಾಮದ ಚಿಗುರು ಚೇತನ ಗೆಳೆಯರ ಬಳಗದಿಂದ ವಿಶೇಷ ಅನ್ನ ಸಂತರ್ಪಣೆಯ ಮಹಾ ಪ್ರಸಾದದ ಆಯೋಜನೆ ಮಾಡಲಾಯಿತು. ರಾತ್ರಿ ವೇಳೆ ಗ್ರಾಮದಲ್ಲಿ ಉಚಿತ ನಾಟಕ ಪ್ರದರ್ಶನ ಹಾಗೂ ಶನಿವಾರ ಕಡುಬಿನ ಕಾಳಗ ಮತ್ತು ಸುಡುವ ಕಾರ್ಯಕ್ರಮ ನೆರವೇರಿಸುವುದಾಗಿ ಶ್ರೀವೀರಭದ್ರೇಶ್ವರ ಜಾತ್ರಾ ಸೇವಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯಲಬುರ್ಗಾ ಪಟ್ಟಣದ ಶ್ರೀಧರ ಮುರಡಿ ಮಠದ ಬಸವಲಿಂಗ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಅಭಿನವ ಪ್ರಭು ಮಹಾಸ್ವಾಮಿಗಳು,ಪ್ರಮುಖರಾದ ನವೀನ ಕುಮಾರ ಗುಳಗಣ್ಣನವರ್, ಈರಪ್ಪ ಬಿಸನಹಳ್ಳಿ, ಕಳಕಪ್ಪ ಕಂಬಳಿ, ಹೆಚ್ ಡಿ ಪಾಟೀಲ್,ಉದಯ ರಾಯರೆಡ್ಡಿ, ಬಸವನಗೌಡ ಪಾಟೀಲ ಸಿಂದಗಿ, ಗ್ರಾಮದ ಪ್ರಮುಖರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು.