You are currently viewing PV NEWS EXCLUSIVE | ಸರ್ವೇ ನಂ. 78 ಕುರಿತು ತಪ್ಪು ಮಾಹಿತಿ ಹರಡದಂತೆ ಸೇವಾದಾರರ ಶರಣಯ್ಯ ಹುಣಸಿಮರದ್ ಎಚ್ಚರಿಕೆ : ವಕೀಲ ಜಂಗ್ಲಿಗೆ ಟಕ್ಕರ್! 

PV NEWS EXCLUSIVE | ಸರ್ವೇ ನಂ. 78 ಕುರಿತು ತಪ್ಪು ಮಾಹಿತಿ ಹರಡದಂತೆ ಸೇವಾದಾರರ ಶರಣಯ್ಯ ಹುಣಸಿಮರದ್ ಎಚ್ಚರಿಕೆ : ವಕೀಲ ಜಂಗ್ಲಿಗೆ ಟಕ್ಕರ್! 

PV NEWS EXCLUSIVE | ಸರ್ವೇ ನಂ. 78 ಕುರಿತು ತಪ್ಪು ಮಾಹಿತಿ ಹರಡದಂತೆ ಸೇವಾದಾರರ ಶರಣಯ್ಯ ಹುಣಸಿಮರದ್ ಎಚ್ಚರಿಕೆ : ವಕೀಲ ಜಂಗ್ಲಿಗೆ ಟಕ್ಕರ್! 

PV NEWS ಕನ್ನಡ 24×7 |ಸರಣಿ ಸುದ್ದಿ : 05

ಕುಕನೂರು | ಜು. 29 : ಗುದ್ನೇಪ್ಪನ ಮಠದ ಸೇವಾದಾರರ ಸಾಗುವಳಿ ಜಮೀನಿನ ಕುರಿತು ಇತ್ತೀಚೆಗೆ ಭೂ ನ್ಯಾಯ ಮಂಡಳಿಯ ಸದಸ್ಯ ಹಾಗೂ ನ್ಯಾಯವಾದಿ ಬಸವರಾಜ್ ಜಂಗ್ಲಿ ನೀಡಿರುವ ಹೇಳಿಕೆಗಳು ವಾಸ್ತವಾಂಶಗಳಿಗೆ ವಿರುದ್ಧವಾಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಗುದ್ನೇಪ್ಪನ ಮಠದ ಸೇವಾದಾರ ಶರಣಯ್ಯ ವಿ. ಹುಣಸಿಮರದ ಆರೋಪಿಸಿದರು.

ಬುಧವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, 1981ರಲ್ಲಿ ಯಲಬುರ್ಗಾ ಭೂ ನ್ಯಾಯ ಮಂಡಳಿಯು ಮಠದ ಸೇವೆ ಸಲ್ಲಿಸುತ್ತಾ ಸರ್ಕಾರಕ್ಕೆ ಗೇಣಿ ಪಾವತಿಸಿ ಸಾಗುವಳಿ ಮಾಡುತ್ತಿದ್ದ 18 ಮಂದಿ ಸೇವಾದಾರರಿಗೆ 40 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು ಎಂದು ತಿಳಿಸಿದರು. ಈ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠವೂ ಎತ್ತಿ ಹಿಡಿದಿದ್ದು, ಸೇವಾದಾರರು ಸಾಗುವಳಿ ಮಾಡುತ್ತಿರುವ ಜಮೀನನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಿಸಬಹುದು ಎಂದು ಸ್ಪಷ್ಟಪಡಿಸಿದೆ ಎಂದರು.

ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸದೆ, ಸೇವಾದಾರರು ಸಾಗುವಳಿ ಮಾಡುತ್ತಿರುವ ಜಮೀನಿನಲ್ಲೇ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಕಾನೂನುಬಾಹಿರವಾಗಿದೆ ಎಂದು ದೂರಿದರು.

ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ

ಈ ವಿಷಯ ಸಂಬಂಧ ಸೇವಾದಾರರು ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ಪ್ರಸ್ತುತ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಟ್ರಿಬ್ಯೂನಲ್ ಹಾಗೂ ನ್ಯಾಯಾಲಯದ ಆದೇಶಗಳನ್ನು ಸಮಗ್ರವಾಗಿ ಪರಿಶೀಲಿಸಿದರೆ ಸರ್ವೇ ನಂ. 78ರಲ್ಲಿ ಸೇವಾದಾರರ ಸಾಗುವಳಿ ಜಮೀನು ಇರುವುದನ್ನು ಸ್ಪಷ್ಟವಾಗಿ ಕಾಣಬಹುದು ಎಂದು ಹೇಳಿದರು.

ಮಠದ ಪಕ್ಕದಲ್ಲಿರುವ ಮನೆಗಳು ಸೇವಾದಾರರದ್ದೇ

ಗುದ್ನೇಪ್ಪನ ಮಠದ ಮನೆಗಳು ಗ್ರಾಮ ಠಾಣೆ ವ್ಯಾಪ್ತಿಯಲ್ಲಿದ್ದು, ಬಹುತೇಕ ಮನೆಗಳು ಪಟ್ಟಣ ಪಂಚಾಯಿತಿಯ ದಾಖಲಾತಿಗಳಲ್ಲಿವೆ. ಉಳಿದ ಮನೆಗಳೂ ಸೇವಾದಾರರು ಹಾಗೂ ಪೂಜಾರಿಗಳ ಕುಟುಂಬಗಳಿಗೆ ಸೇರಿದ್ದು, ಹೊರಗಿನವರದ್ದಲ್ಲ ಎಂದು ಸ್ಪಷ್ಟಪಡಿಸಿದರು.

ಮಠದ ಸೇವೆಗೆ ಯಾವುದೇ ವೇತನ ಅಥವಾ ಆದಾಯದ ಮೂಲವಿಲ್ಲದ ಕಾರಣ ಆರ್ಥಿಕ ಸಂಕಷ್ಟದಲ್ಲಿ ಕೆಲ ಸೇವಾದಾರರು ತಮ್ಮ ಭೂಮಿಯ ಒಂದು ಭಾಗವನ್ನು ಮಾರಾಟ ಮಾಡಿರುವುದು ನಿಜ. ಆದರೆ ಇದನ್ನು ತಪ್ಪಾಗಿ ಅರ್ಥೈಸಿ ಭೂ ಮಂಜೂರಾತಿ ನಿಯಮ ಉಲ್ಲಂಘನೆ ನಡೆದಿದೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದರು.

ಗಣಿಗಾರಿಕೆ ಆರೋಪ ತಳ್ಳಿ ಹಾಕಿದ ಸೇವಾದಾರರು

ಸರ್ವೇ ನಂ. 78ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪವನ್ನು ಶರಣಯ್ಯ ಹುಣಸಿಮರದ ತಳ್ಳಿಹಾಕಿದರು. ಗಣಿಗಾರಿಕೆ ನಡೆಯುತ್ತಿರುವುದು ಪಕ್ಕದ ಸರ್ವೇ ಸಂಖ್ಯೆಗಳಲ್ಲೇ ಹೊರತು, ಸರ್ವೇ ನಂ. 78ರಲ್ಲಿ ಅಲ್ಲ ಎಂದು ಅವರು ಹೇಳಿದರು.

ಸರ್ಕಾರಿ ಕಟ್ಟಡ ನಿರ್ಮಿಸಲು ಆಯ್ಕೆ ಮಾಡಿರುವ ಸ್ಥಳದ ಸಮೀಪವೇ ಕಲ್ಲು ಗಣಿಗಾರಿಕೆ ಇರುವುದರಿಂದ ಭವಿಷ್ಯದಲ್ಲಿ ಶಬ್ದ, ಧೂಳು ಹಾಗೂ ವಾಯು ಮಾಲಿನ್ಯದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಸುರಕ್ಷಿತ ಸ್ಥಳದಲ್ಲಿ ಕಟ್ಟಡ ನಿರ್ಮಿಸಬೇಕು ಎಂದು ಮನವಿ ಮಾಡಿದರು.

“ನಾವು ಅಭಿವೃದ್ಧಿ ವಿರೋಧಿಗಳಲ್ಲ”

“ನಾವು ಅಭಿವೃದ್ಧಿಗೆ ವಿರೋಧಿಗಳಲ್ಲ. ಆದರೆ ನಮ್ಮ ಸಾಗುವಳಿ ಜಮೀನಿನಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಬಾರದು ಎಂಬುದಷ್ಟೇ ನಮ್ಮ ಹೋರಾಟದ ಉದ್ದೇಶ. ವಾಸ್ತವಾಂಶಗಳನ್ನು ಅರಿತು ಜನರಿಗೆ ಸತ್ಯವನ್ನು ತಿಳಿಸಬೇಕು. ಯಾರನ್ನೂ ಮೆಚ್ಚಿಸಲು ತಪ್ಪು ಹೇಳಿಕೆಗಳನ್ನು ನೀಡಬಾರದು” ಎಂದು ಶರಣಯ್ಯ ವಿ. ಹುಣಸಿಮರದ ಆಗ್ರಹಿಸಿದರು.

ಈ ವೇಳೆಯಲ್ಲಿ ಶರಣಯ್ಯ ಹಳೆಮನಿ, ಶಿವರಾಜ ಗಲಬಿ, ಚಂದ್ರು ಯಲವತ್ತಿ, ಪ್ರಕಾಶ್ ನಾಗಣ್ಣನವರ್, ಶೇಖರಯ್ಯ ಹುಣಸಿಮರದ ಹಾಗೂ ಮಂಜುನಾಥ್ ಹಿರೇಮಠ ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!