SPECIAL STORY : ಪಂಚಾಯತ್ ಚುನಾವಣೆಯಲ್ಲಿ ಮಹತ್ವದ ಬದಲಾವಣೆ : ‘ಒಂದು ಗ್ರಾಮ-ಒಂದು ಚುನಾವಣೆ’ ನೀತಿ ಜಾರಿಗೆ ತಯಾರಿ? : ಏಕಕಾಲಕ್ಕೆ ಇಲೆಕ್ಷನ್?
ವಿಶೇಷ ವರದಿ : ಚಂದ್ರು ಆರ್. ಭಾನಾಪೂರ್, ಸಂಪಾದಕರು
ಪ್ರಜಾವೀಕ್ಷಣೆ ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ಅವಧಿ ಮುಕ್ತಾಯಗೊಳ್ಳುತ್ತಿದ್ದು, ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರ ಆದೇಶಿಸಿದೆ. ಇದೀಗ ಗ್ರಾಮ ಪಂಚಾಯಿತಿಗೆ ಒಂದು ಸಲ, ತಾಲೂಕು ಪಂಚಾಯಿತಿಗೆ ಇನ್ನೊಂದು ಸಲ, ಜಿಲ್ಲಾ ಪಂಚಾಯಿತಿಗೆ ಮತ್ತೊಂದು ಸಲ… ಹೀಗೆ ಪದೇ ಪದೇ ಮತಗಟ್ಟೆಗೆ ಹೋಗಿ ಮತದಾನ ಮಾಡುವ ಕಿರಿಕಿರಿ ಇನ್ಮುಂದೆ ತಪ್ಪಲಿದೆ. ಇದಕ್ಕೆ ರಾಜ್ಯ ಸರ್ಕಾರವು ‘ಮೂರು ಸ್ತರ: ಒಂದು ಗ್ರಾಮ-ಒಂದು ಚುನಾವಣೆ’ ಎನ್ನುವ ಹೊಸ ಸೂತ್ರವನ್ನು ಜಾರಿಗೆ ತರಲು ಸಜ್ಜಾಗುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಬದಲಾವಣೆಯು ರಾಜ್ಯದ ಶೇ. 90ರಷ್ಟು ಹಳ್ಳಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ತಿಳಿದು ಬಂದಿದೆ. ಹಾಗಾದರೆ ಈ ಚುನಾವಣೆ ಯಾವಾಗ? ಮತದಾನ ಹೇಗೆ ಮಾಡಬೇಕು? ಇಲ್ಲಿದೆ ಸಂಫೂರ್ಣ ಮಾಹಿತಿ…
-:ಏನಿದು ‘ಒಂದು ಗ್ರಾಮ-ಒಂದು ಚುನಾವಣೆ’?
ರಾಜ್ಯದಲ್ಲಿ ಇದುವರೆಗೂ ಪಂಚಾಯತ್ ರಾಜ್ ವ್ಯವಸ್ಥೆಯ ಈ ಮೂರು ಹಂತಗಳಿಗೆ (ಗ್ರಾಮ, ತಾಲೂಕು, ಜಿಲ್ಲಾ) ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ, ಈ ಬಾರಿ 2026ರ ಏಪ್ರಿಲ್ ತಿಂಗಳ ಒಳಗೆ ಈ ಮೂರೂ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ಸರ್ಕಾರದ ಹಣ, ನೌಕರರ ಶ್ರಮ ಮತ್ತು ಮತದಾರರ ಸಮಯ ಉಳಿಯಲಿದೆ ಎಂದು ಭಾವಿಸಲಾಗಿದೆ.
-:ಇವಿಎಂ (EVM) ಇರಲ್ಲ, ಬ್ಯಾಲೆಟ್ ಪೇಪರ್ ವಾಪಸ್!
ರಾಜ್ಯದಲ್ಲೇ ಇದು ಅತಿದೊಡ್ಡ ಸುದ್ದಿ. ಸಾಮಾನ್ಯವಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಇವಿಎಂ EVM (Electronic Voting Machine) ಬಳಸಲಾಗುತ್ತಿತ್ತು. ಆದರೆ, ಈ ಬಾರಿ ಮೂರೂ ಚುನಾವಣೆ ಒಟ್ಟಿಗೆ ನಡೆಯುವುದರಿಂದ, ಗೊಂದಲ ತಪ್ಪಿಸಲು ಹಳೆಯ ಪದ್ಧತಿಯಾದ ‘ಮತ ಪತ್ರ’ (Ballot Paper) ಬಳಸಲು ನಿರ್ಧರಿಸಲಾಗಿದೆ. ನೀವು ಒಂದೇ ಬಾರಿ ಮೂರು ಪೇಪರ್‌ಗಳಲ್ಲಿ ಸೀಲ್ ಹಾಕಿ ಮತ ಹಾಕಬೇಕಾಗುತ್ತದೆ . ಇದು ಸುಲಭದ ಕೆಲಸವಾಗಲಿದೆ.
ಈ ಚುನಾವಣೆ ವಿಳಂಬ ಯಾಕೆ ಆಗಿತ್ತು?
ವಾಸ್ತವವಾಗಿ 2021ರಲ್ಲೇ ಚುನಾವಣೆ ನಡೆಯಬೇಕಿತ್ತು. ಆದರೆ ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ಗೊಂದಲಗಳಿಂದಾಗಿ ಚುನಾವಣೆ ಮುಂದೂಡಲ್ಪಟ್ಟಿತ್ತು. ಈಗ ರಾಜ್ಯದ ಶೇ.90ರಷ್ಟು ಗ್ರಾಮ ಪಂಚಾಯಿತಿಗಳ ಅವಧಿ ಮುಗಿಯುತ್ತಿರುವುದರಿಂದ, ಎಲ್ಲವನ್ನೂ ಒಟ್ಟಿಗೆ ಸೇರಿಸಿ ಎಲೆಕ್ಷನ್ ಮಾಡಲು ಸಿದ್ಧತೆ ನಡೆದಿದೆ.