PV NEWS : ಯಲಬುರ್ಗಾ| ಸಮಸ್ತ ಆ್ಯಪ್‌ನ ಹೆಚ್ಚುವರಿ ಕೆಲಸದ ಒತ್ತಡ ನಿಲ್ಲಿಸಲು ಆಗ್ರಹ!!
PN NEWS KANNADA 24*7 :
ಯಲಬುರ್ಗಾ, ಸೆ.25 :ಸಮಸ್ತ ಆ್ಯಪ್ ಮೂಲಕ ಆಶಾ ಕಾರ್ಯಕರ್ತೆಯರ ಮೇಲೆ ಹೇರಲಾಗುತ್ತಿರುವ ಹೆಚ್ಚುವರಿ ಆನ್‌ಲೈನ್ ಕೆಲಸದ ಒತ್ತಡವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ ಸಂಯೋಜಿತ) ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗಡ್ಡಿ ಮಾತನಾಡಿ, ‘ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಈಗಾಗಲೇ ಹಲವು ಆರೋಗ್ಯ ಕಾರ್ಯಕ್ರಮಗಳ ಜವಾಬ್ದಾರಿ ಹೊಂದಿರುವ ಅವರ ಮೇಲೆ ಸಮಸ್ತ ಆ್ಯಪ್ ಮೂಲಕ ಹೆಚ್ಚುವರಿ ಆನ್‌ಲೈನ್ ಕೆಲಸ ಹೇರಲಾಗಿದೆ. ಇದರಿಂದ ಆರೋಗ್ಯ ಸೇವೆಗಿಂತ ಮೊಬೈಲ್‌ನಲ್ಲಿ ದಾಖಲೆ ನಮೂದಿಸುವುದಕ್ಕೇ ಹೆಚ್ಚಿನ ಸಮಯ ವ್ಯಯವಾಗುತ್ತಿದೆ’ ಎಂದು ಆರೋಪಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ, ‘ಸಮಸ್ತ ಆ್ಯಪ್ ಬಳಕೆಗೆ ಅಗತ್ಯವಾದ ಸ್ಮಾರ್ಟ್‌ಫೋನ್, ಇಂಟರ್‌ನೆಟ್, ನೆಟ್‌ವರ್ಕ್ ಹಾಗೂ ತಾಂತ್ರಿಕ ತರಬೇತಿಯನ್ನು ಸಮರ್ಪಕವಾಗಿ ಒದಗಿಸಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಹಾಗೂ ಸರ್ವರ್ ಸಮಸ್ಯೆಯಿಂದ ಮಾಹಿತಿ ದಾಖಲಿಸಲು ತೊಂದರೆಯಾಗುತ್ತಿದೆ. ಅಗತ್ಯ ಸೌಲಭ್ಯ ಕಲ್ಪಿಸದೆ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸುವಂತೆ ಒತ್ತಡ ಹೇರುವುದು ಸರಿಯಲ್ಲ’ ಎಂದು ಹೇಳಿದರು.
‘ಆಶಾ ಕಾರ್ಯಕರ್ತೆಯರು ಸ್ವಂತ ಮೊಬೈಲ್ ಹಾಗೂ ಸ್ವಂತ ಖರ್ಚಿನಲ್ಲಿ ಇಂಟರ್‌ನೆಟ್ ಬಳಸಿ ಹೆಚ್ಚುವರಿ ಕೆಲಸ ನಿರ್ವಹಿಸುವುದನ್ನು ನಿಲ್ಲಿಸಬೇಕು. ಮೊಬೈಲ್ ಬಳಕೆಯ ಮಾಸಿಕ ವೆಚ್ಚ ಸೇರಿದಂತೆ ಅಗತ್ಯ ಭತ್ಯೆಗಳನ್ನು ಸಮರ್ಪಕವಾಗಿ ನೀಡಬೇಕು. ತಾಂತ್ರಿಕ ಕಾರಣಗಳಿಂದ ಮಾಹಿತಿ ದಾಖಲಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಕಾರ್ಯಕರ್ತೆಯರನ್ನು ಹೊಣೆಗಾರರನ್ನಾಗಿ ಮಾಡಬಾರದು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರ ಘೋಷಿಸಿರುವ ಫಿಕ್ಸ್‌ಡ್ ಫೇಮೆಂಟ್ ಜಾರಿಗೊಳಿಸಬೇಕು. ಜನವರಿಯಿಂದ ಬಾಕಿ ಇರುವ ಇನ್ಸೆಂಟಿವ್ ಹಾಗೂ 2023ರಿಂದ ಬಾಕಿ ಇರುವ ಟಿಬಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ತಾಲೂಕು ಮಟ್ಟದಲ್ಲೇ ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೇಡಿಕೆಗಳು ಈಡೇರದಿದ್ದರೆ ಹೋರಾಟವನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದರು.
ನಂತರ ತಾಲೂಕು ಆರೋಗ್ಯಾಧಿಕಾರಿ ನೇತ್ರಾವತಿ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷೆ ಶಂಕ್ರಮ್ಮ ಹಳ್ಳಿಕೇರಿ, ಕಾರ್ಯದರ್ಶಿ ಶಿವಮ್ಮ, ಜಂಟಿ ಕಾರ್ಯದರ್ಶಿ ಅನ್ನಪೂರ್ಣ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.