You are currently viewing PV NEWS EXCLUSIVE : ಕುಕನೂರು | ಗುದ್ನೇಪ್ಪನ ಮಠದ ಜಮೀನಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ಬರೋಬ್ಬರಿ 137 ಅನಧಿಕೃತ ಮನೆಗಳ ನಿರ್ಮಾಣ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ!

PV NEWS EXCLUSIVE : ಕುಕನೂರು | ಗುದ್ನೇಪ್ಪನ ಮಠದ ಜಮೀನಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ಬರೋಬ್ಬರಿ 137 ಅನಧಿಕೃತ ಮನೆಗಳ ನಿರ್ಮಾಣ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ!

PV NEWS EXCLUSIVE : ಕುಕನೂರು | ಗುದ್ನೇಪ್ಪನ ಮಠದ ಜಮೀನಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ಬರೋಬ್ಬರಿ 137 ಅನಧಿಕೃತ ಮನೆಗಳ ನಿರ್ಮಾಣ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ!

PV NEWS ಕನ್ನಡ 24×7 | ಕುಕನೂರು

ಕುಕನೂರು, 28, (PV NEWS ಕನ್ನಡ 24×7): ಪಟ್ಟಣದ ಸರ್ವೆ ನಂ. 78ರ ವ್ಯಾಪ್ತಿಯ 19ನೇ ವಾರ್ಡಿನ ಗುದ್ನೇಪ್ಪನ ಮಠ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ವ್ಯಾಪಕವಾಗಿ ಅಕ್ರಮ ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಾನ ಮನಸ್ಕರ ನಾಗರೀಕ ಬಳಗದ ಮುಖಂಡ ಬಸವರಾಜ ಜಂಗ್ಲಿ ತೀವ್ರವಾಗಿ ಒತ್ತಾಯಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ​ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿಸ್ತೃತ ಮಾಹಿತಿ ನೀಡಿದ ಜಂಗ್ಲಿ, “ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಈ ಜಮೀನಿನಲ್ಲಿ ಯಾವುದೇ ರೀತಿಯ ಅಧಿಕೃತ ಹಕ್ಕುಪತ್ರಗಳಿಲ್ಲದೆ 137 ಮನೆಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಪ್ರಸ್ತುತ ಒಟ್ಟು 194 ಮನೆಗಳಿದ್ದು, ಅದರಲ್ಲಿ 49 ಪಕ್ಕಾ ಮನೆಗಳು, 137 ಕಚ್ಚಾ ಮನೆಗಳು ಹಾಗೂ 8 ಮನೆಗಳು ನಿರ್ಮಾಣ ಹಂತದಲ್ಲಿವೆ. ಕೆಲವರು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ತಮ್ಮಿಷ್ಟದಂತೆ ಅನಧಿಕೃತ ನಿರ್ಮಾಣ ಮಾಡಿಕೊಂಡಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದರು.

ಅಧಿಕಾರಿಗಳ ನಿರ್ಲಕ್ಷ್ಯ – ಲೋಕಾಯುಕ್ತಕ್ಕೆ ದೂರು:

“ಸರ್ಕಾರಿ ಜಮೀನಿನಲ್ಲಿ ಅಕ್ರಮ ಒತ್ತುವರಿ, ಅನಧಿಕೃತ ಮನೆ ನಿರ್ಮಾಣ ಹಾಗೂ ಭಾರಿ ಪ್ರಮಾಣದ ಅಕ್ರಮ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಈಗಾಗಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಲೋಕಾಯುಕ್ತ ತನಿಖೆ ವಿಚಾರಣೆ ನಡೆದು ವರದಿ ಸಿದ್ಧವಾಗಿದ್ದರೂ, ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಸೌಧ ಕಾಮಗಾರಿಗೆ ಪೊಲೀಸ್ ಭದ್ರತೆಗೆ ಆಗ್ರಹ:

“ಪ್ರಜಾಸೌಧ ನಿರ್ಮಾಣವು ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ಯೋಜನೆಯಾಗಿದೆ. ಈ ಕಾಮಗಾರಿ ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ನಡೆಯಲು ತಕ್ಷಣವೇ ಅಗತ್ಯ ಪೊಲೀಸ್ ಭದ್ರತೆ ಒದಗಿಸಬೇಕು. ಸರ್ಕಾರಿ ಕಾಮಗಾರಿಗೆ ಅಡ್ಡಿಪಡಿಸುವ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಬೇಕು. ಜೊತೆಗೆ ಸರ್ಕಾರಿ ಜಮೀನುಗಳ ಒತ್ತುವರಿ, ಅನಧಿಕೃತ ಭೂ ವರ್ಗಾವಣೆ ಮತ್ತು ಕಚ್ಚಾ-ಪಕ್ಕಾ ಮನೆ ನಿರ್ಮಾಣದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು,” ಎಂದು ಅವರು ಹೇಳಿದರು.

​ಈ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಮೇಶ್ ಗಜಕೋಶ, ದೇವೇಂದ್ರ ತೊಂಡಿಹಾಳ, ಕಾರ್ತಿಕ್ ಜಾದವ್ ಹಾಗೂ ಮುತ್ತಣ್ಣ ರಾಜೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

-ವರದಿ = PV NEWS ಕನ್ನಡ 24×7 ( ಇದು ಪ್ರಜೆಗಳ ಪರ ಹದ್ದಿರ ಕಣ್ಣು)

Prajavikshane

Chandru R Bhanapaur

Leave a Reply

error: Content is protected !!