PV NEWS : ಕುಕನೂರು | ಸಚಿವ ಕಾಶಪ್ಪನವರ್ ‘ಹೊಲಗೇರಿ’ ಪದ ಬಳಕೆ ಖಂಡಿಸಿ ಆ.17ರಂದು ಕುಕನೂರಿನಲ್ಲಿ ಬೃಹತ್ ಪ್ರತಿಭಟನೆ!
ಕ್ಷಮೆಯಾಚನೆಗೆ ಆಗ್ರಹ; ಸಂಪುಟದಿಂದ ವಜಾ, ಕಾಂಗ್ರೆಸ್‌ನಿಂದ ಉಚ್ಚಾಟನೆಗೆ ದಲಿತ ಸಂಘಟನೆಗಳ ಒತ್ತಾಯ
PV NEWS ಕನ್ನಡ 24×7 | ವರದಿ
ಕುಕನೂರು, ಆ.13: ಸಣ್ಣ ಕೈಗಾರಿಕೆ ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಕಾರ್ಯಕ್ರಮವೊಂದರಲ್ಲಿ ‘ಹೊಲಗೇರಿ’ ಎಂಬ ಪದ ಬಳಸಿರುವುದು ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರು ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಸುರೇಶ್ ಬಳೊಟಗಿ, ಸಚಿವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ದಲಿತ ಸಮುದಾಯದ ಕ್ಷಮೆಯಾಚಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಚಿವರನ್ನು ಸಂಪುಟದಿಂದ ವಜಾಗೊಳಿಸುವುದರ ಜತೆಗೆ ಕಾಂಗ್ರೆಸ್ ಪಕ್ಷದಿಂದಲೂ ಉಚ್ಚಾಟಿಸಬೇಕು ಎಂದು ಅವರು ಒತ್ತಾಯಿಸಿದರು.
ದಲಿತ ಮುಖಂಡ ಲಕ್ಷ್ಮಣ ಕಾಳಿ ಮಾತನಾಡಿ, ‘ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಸಚಿವರು ಮಾತನಾಡಿರುವುದು ಖಂಡನೀಯ. ಕೂಡಲೇ ಕ್ಷಮೆಯಾಚಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪ್ರಕಾಶ ಹಿರೇಮನಿ ಮಾತನಾಡಿ, ಸಚಿವರ ಹೇಳಿಕೆ ಖಂಡಿಸಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುವುದು. ಎಲ್ಲ ವರ್ಗಗಳ ಜನರು ಹೋರಾಟದಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಆ.17ರಂದು ಪ್ರತಿಭಟನಾ ಮೆರವಣಿಗೆ
ಸಚಿವರ ಹೇಳಿಕೆ ಖಂಡಿಸಿ ಆ.17ರಂದು ಬೆಳಿಗ್ಗೆ ಕುಕನೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಶಿರೂರು ವೀರಭದ್ರಪ್ಪ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಸಂಘಟನೆಗಳು ನಿರ್ಧರಿಸಿವೆ.
ಮೆರವಣಿಗೆ ಬಳಿಕ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮುಖಂಡರು ತಿಳಿಸಿದರು.
ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು, ಯುವಕರು, ಮಹಿಳೆಯರು ಮತ್ತು ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಸರ್ಕಾರದ ವಿರುದ್ಧವೂ ಆಕ್ರೋಶ
ಸಚಿವರು ದಲಿತ ಸಮುದಾಯದ ಜತೆಗೆ ಮಠಾಧೀಶರು, ಪೊಲೀಸ್ ಅಧಿಕಾರಿಗಳು, ರೈತರು ಹಾಗೂ ಪತ್ರಕರ್ತರ ಬಗ್ಗೆಯೂ ದೌರ್ಜನ್ಯ ಮತ್ತು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು. ಈ ಆರೋಪಗಳ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ ಹಿರೇಮನಿ, ಲಕ್ಷ್ಮಣ ಕಾಳಿ, ಶಶಿಕುಮಾರ್ ಭಜಂತ್ರಿ, ಭೀಮಶಿ ಭಂಡಾರಿ, ವಿಜಯಕುಮಾರ್ ಚವಾಣ್, ರಾಘವೇಂದ್ರ ಬಳಿಗೇರಿ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.