You are currently viewing PV NEWS : ಕುಕನೂರು |ಕ್ರೀಡಾ ಮನೋಭಾವ ಚೈತನ್ಯದ ಸಂಕೇತ: ಮಂಜುನಾಥ್ ಗಟ್ಟೆಪ್ಪನವರ್

PV NEWS : ಕುಕನೂರು |ಕ್ರೀಡಾ ಮನೋಭಾವ ಚೈತನ್ಯದ ಸಂಕೇತ: ಮಂಜುನಾಥ್ ಗಟ್ಟೆಪ್ಪನವರ್

PV NEWS : ಕುಕನೂರು |ಕ್ರೀಡಾ ಮನೋಭಾವ ಚೈತನ್ಯದ ಸಂಕೇತ: ಮಂಜುನಾಥ್ ಗಟ್ಟೆಪ್ಪನವರ್

PV NEWS ಕನ್ನಡ 24×7 | ಸ್ಥಳೀಯ ಸುದ್ದಿ

“ಕ್ರೀಡೆಯಿಂದ ದೂರವಾದ ಜೀವನಶೈಲಿಯಿಂದಲೇ ಇಂದು ಬಿಪಿ, ಶುಗರ್ ಸಮಸ್ಯೆ ಹೆಚ್ಚುತ್ತಿದೆ” — 19 ಶಾಲೆಗಳ ವಿದ್ಯಾರ್ಥಿಗಳಿಂದ ಕ್ರೀಡಾ ಪ್ರತಿಭಾ ಅನಾವರಣ

ಕುಕನೂರು, ಸೆ. 03 : “ಕ್ರೀಡೆ ಕೇವಲ ಸ್ಪರ್ಧೆಯಲ್ಲ; ಅದು ದೈಹಿಕ ಆರೋಗ್ಯ, ಮಾನಸಿಕ ಚೈತನ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವ ಪ್ರಮುಖ ಸಾಧನ. ಕ್ರೀಡೆಯಿಂದ ದೂರವಾಗುತ್ತಿರುವ ಜೀವನಶೈಲಿಯಿಂದಾಗಿ ಇಂದು ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ” ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಗಟ್ಟೆಪ್ಪನವರ್ ಹೇಳಿದರು.

ತಾಲ್ಲೂಕಿನ ಕುದರಿಮೋತಿ ಗ್ರಾಮದಲ್ಲಿ ಕುದರಿಮೋತಿ–ಮಂಗಳೂರು ವಲಯದ ವತಿಯಿಂದ ಆಯೋಜಿಸಿದ್ದ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ಬೆಳೆಸಿಕೊಳ್ಳುವ ಕ್ರೀಡಾ ಪ್ರತಿಭೆಯನ್ನು ಮುಂದುವರಿಸಿ, ಭವಿಷ್ಯದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವಂತಾಗಬೇಕು” ಎಂದು ಅವರು ಹೇಳಿದರು.

ಶಿಕ್ಷಕರು–ಪೋಷಕರ ಪಾತ್ರವೂ ಮಹತ್ವದ್ದು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ದಳಪತಿ ಹನುಮಗೌಡ ಪೊಲೀಸ್ ಪಾಟೀಲ, “ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸುವುದು ಅತ್ಯವಶ್ಯಕ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಮಕ್ಕಳ ಆಸಕ್ತಿ ಹಾಗೂ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ನೀಡಬೇಕು” ಎಂದರು.

ಕ್ರೀಡಾಜ್ಯೋತಿಯೊಂದಿಗೆ ಸಂಭ್ರಮದ ಮೆರವಣಿಗೆ

ಕುದರಿಮೋತಿ ಗ್ರಾಮದ ಆಂಜನೇಯ ದೇವಸ್ಥಾನದಿಂದ ಗ್ರಾಮದ ಯುವಕರು ಬ್ಯಾಂಡ್‌ಸೆಟ್‌ನೊಂದಿಗೆ ಕ್ರೀಡಾಜ್ಯೋತಿಯನ್ನು ಸಂಭ್ರಮದಿಂದ ಮೈದಾನಕ್ಕೆ ತಂದರು. ಬಳಿಕ ವೇದಿಕೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ದಾಸರ್ ಅವರಿಗೆ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಲಾಯಿತು.

ವಲಯದ ಮಂಗಳೂರು, ರ್ಯಾವಣಕಿ, ಕದ್ರಳ್ಳಿ, ಮೊರಾರ್ಜಿ ವಸತಿ ಶಾಲೆ, ವಟಪರವಿ, ಭೈರನಾಯಕನಹಳ್ಳಿ ಸೇರಿದಂತೆ ಒಟ್ಟು 19 ಶಾಲೆಗಳ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕ್ರೀಡಾಕೂಟಕ್ಕೆ ಮೆರುಗು ತಂದರು.

ಕ್ರೀಡಾಕೂಟ ಆಯೋಜನೆ ದೊಡ್ಡ ಸವಾಲಾಗಿತ್ತು: ಉಮೇಶ್ ದಾಸರ್

“ಈ ಬಾರಿ ವಲಯ ಮಟ್ಟದ ಕ್ರೀಡಾಕೂಟದ ಜವಾಬ್ದಾರಿ ನಮ್ಮ ಶಾಲೆಗೆ ದೊರೆತಿರುವುದು ಸಂತೋಷದ ಸಂಗತಿ. ಆದರೆ, ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ಆಯೋಜಿಸುವುದು ದೊಡ್ಡ ಸವಾಲಾಗಿತ್ತು. ಎಂಟನೇ ತರಗತಿಯನ್ನು ಪ್ರಾಥಮಿಕ ಹಂತಕ್ಕೆ ಸೇರಿಸುವ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ, ಕೋರ್ಟ್ ಆದೇಶದ ಬಳಿಕವೇ ಕ್ರೀಡಾ ವೇಳಾಪಟ್ಟಿ ಹಾಗೂ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಸಮಯ ದೊರೆಯಿತು” ಎಂದು ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ದಾಸರ್ ತಿಳಿಸಿದರು.

“ಈ ಎಲ್ಲದರ ನಡುವೆಯೂ ಗ್ರಾಮದ ಶಿಕ್ಷಣ ಪ್ರೇಮಿಗಳು, ಯುವಕರು, ವಿವಿಧ ಸಂಘ–ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದಿಂದ ಕ್ರೀಡಾಕೂಟವನ್ನು ಸಾಧ್ಯವಾದಷ್ಟು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗಿದೆ” ಎಂದರು.

ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಸಾಧನೆ

ಬಾಲಕರ ಖೋಖೋ ಹಾಗೂ ವಾಲಿಬಾಲ್‌ನಲ್ಲಿ ಕುದರಿಮೋತಿ ಪಿಎಂ ಶ್ರೀ ಎಚ್‌ಪಿಎಸ್ ಶಾಲೆ ಪ್ರಥಮ ಸ್ಥಾನ ಪಡೆಯಿತು.

ಬಾಲಕ ಹಾಗೂ ಬಾಲಕಿಯರ ಥ್ರೋಬಾಲ್ ಎರಡೂ ವಿಭಾಗಗಳಲ್ಲಿ ವಟಪರವಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು.

ಬಾಲಕಿಯರ ಖೋಖೋದಲ್ಲಿ ರ್ಯಾವಣಕಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದುಕೊಂಡರು.

ಕುದರಿಮೋತಿ ಶಾಲೆಯ ಹುಸೇನ್ ಬಾಷಾ ಮಕಾನದಾರ 100 ಮೀಟರ್ ಓಟದಲ್ಲಿ ದ್ವಿತೀಯ, ಶಿವಮೂರ್ತಿ ಕಾಳಿ 600 ಮೀಟರ್ ಓಟದಲ್ಲಿ ಪ್ರಥಮ ಹಾಗೂ ನಾಗರಾಜ್ ದೊಡ್ಡಮನಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಫೈದಾಬೇಗಂ, ಲಕ್ಷ್ಮೀ ವಿಜಯ ದಾಸರ್, ಗ್ರಾಮದ ಹಿರಿಯರಾದ ಸುಭಾಷ್ ಈಳಿಗೇರ್, ಮರಿಯಪ್ಪ ಕೆಂಗಾರ್, ದುರ್ಗಪ್ಪ ಕಾಳಿ, ದೇವಪ್ಪ ಕಾಳಿ, ಬಿಜೆಪಿ ಮುಖಂಡರಾದ ದ್ಯಾಮಣ್ಣ ಉಚ್ಚಲಕುಂಟಿ, ಪಂಪಾಪತಿ ವಣಗೇರಿ, ಮಂಜು ಕನ್ಯಾಳ್, ಪಾಪು ನೀರಲಗಿ, ಮುತ್ತು ಕಾಳಿ, ಮಂಜು ಕೆಂಗಾರ್, ಶರಣಪ್ಪ ತಲ್ಲೂರ್, ಹನುಮಂತ ಚಿತ್ರಗಾರ, ಈಶಪ್ಪ ವಣಗೇರಿ, ಶಿವಕುಮಾರ್ ಚೌಡ್ಕಿ, ವಿವಿಧ ಶಾಲೆಗಳ ಶಿಕ್ಷಕರು, ಯುವಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ : ಜಾಫರ್ ಕುದ್ರಿಮೋತಿ, ಕುಕನೂರು 

 

Prajavikshane

Chandru R Bhanapaur

Leave a Reply

error: Content is protected !!