BIG NEWS : ಕೇವಲ 4 ದಿನಗಳಲ್ಲಿ ಬಿಜೆಪಿಯ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯನ್ನು ಹಿಂದಿಕ್ಕಿದ ‘ಕಾಕ್ರೋಚ್ ಜನತಾ ಪಾರ್ಟಿ’!

ವಿಶೇಷ ವರದಿ : ಚಂದ್ರು ಆರ್. ಭಾನಾಪುರ್
ಪ್ರಜಾವೀಕ್ಷಣೆ ಡಿಜಿಟಲ್ ಡೆಸ್ಕ್, ಮೇ 21: ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲಿ ಯುವ ಸಮುದಾಯದ ಶಕ್ತಿ ಎಂತಹುದ್ದು ಎಂಬುದಕ್ಕೆ ಇತ್ತೀಚಿನ ಒಂದು ವಿದ್ಯಮಾನ ಸಾಕ್ಷಿಯಾಗಿದೆ. ದೇಶದ ಅತಿ ದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿಯ (BJP) ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನು, ಕೇವಲ ನಾಲ್ಕೇ ದಿನಗಳಲ್ಲಿ ಹೊಸದಾಗಿ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ಪೇಜ್ ಹಿಂದಿಕ್ಕಿ ಹೊಸ ದಾಖಲೆ ಬರೆದಿದೆ.

ಏನಿದು ಘಟನೆ?
‘ಅಭಿಜೀತ್ ದಿಪ್ಕೆ’ ಎಂಬುವವರ ನೇತೃತ್ವದಲ್ಲಿ “ಯುವಕರಿಂದ, ಯುವಕರಿಗಾಗಿ, ಯುವಕರಿಗೋಸ್ಕರ ಇರುವ ರಾಜಕೀಯ ರಂಗ” ಎಂಬ ಘೋಷಣೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (@cockroachjantaparty) ಎಂಬ ವಿಡಂಬನಾತ್ಮಕ ಅಥವಾ ಸಾಂಕೇತಿಕ ಖಾತೆಯನ್ನು ತೆರೆಯಲಾಗಿತ್ತು. ಯುವ ಸಮುದಾಯದ ಭಾರಿ ಬೆಂಬಲದೊಂದಿಗೆ ಈ ಖಾತೆಯು ಕೇವಲ 4 ದಿನಗಳಲ್ಲಿ ಬರೋಬ್ಬರಿ 9.3 ಮಿಲಿಯನ್ (93 ಲಕ್ಷ) ಫಾಲೋವರ್ಸ್ ಸಂಪಾದಿಸಿದೆ.
ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ:
ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಕರೆಸಿಕೊಳ್ಳುವ ಭಾರತೀಯ ಜನತಾ ಪಾರ್ಟಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು (@bjp4india) 18,400 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಹಾಕಿದ ನಂತರ 8.7 ಮಿಲಿಯನ್ (87 ಲಕ್ಷ) ಫಾಲೋವರ್ಸ್ ಹೊಂದಿದೆ. ಆದರೆ ಕೇವಲ 54 ಪೋಸ್ಟ್‌ಗಳನ್ನು ಹೊಂದಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಕೇವಲ ನಾಲ್ಕು ದಿನಗಳಲ್ಲಿ 9.3 ಮಿಲಿಯನ್ (93 ಲಕ್ಷ ) ಫಾಲೋವರ್ಸ್ ಗಳಿಸುವ ಮೂಲಕ ಬಿಜೆಪಿಯನ್ನು ಹಿಂದಿಕ್ಕಿದೆ.
