ಮುದಗಲ್ಲ ವರದಿ..
ವಿದ್ಯಾರ್ಥಿಗಳಿಗೆ ಮೂರು ಗಂಟೆಗಳ ಕಾಲ ಪಾಠ ಮಾಡಿದ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಎಂ. ಗಂಗಣ್ಣ…
ಶಿಕ್ಷಣದ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಿ: ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಲಹೆ
ಮುದಗಲ್: ಪಂಚಾಯತ್ ರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಎಂ. ಗಂಗಣ್ಣ ಅವರು ಇಂದು ಮುದಗಲ್‌ನ ಸಜಲಶ್ರೀ ಪ್ರೌಢಶಾಲೆ ಹಾಗೂ ಎಂ. ಗಂಗಣ್ಣ ಕಾಲೇಜಿನ ವಿದ್ಯಾರ್ಥಿಗಳಿಗೆ ಸುಮಾರು ಮೂರು ಗಂಟೆಗಳ ಕಾಲ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಗುಣಮಟ್ಟದ ಬೋಧನೆ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಸಾಮರ್ಥ್ಯವನ್ನು ಗುರುತಿಸಿ, ಅವರಲ್ಲಿ ಜ್ಞಾನ, ಆತ್ಮವಿಶ್ವಾಸ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ಪಠ್ಯಪುಸ್ತಕದ ಪಾಠಗಳಿಗೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಬೇಕು. ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಸಮಾನ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ ಹಾಗೂ ತಂಡದ ಮನೋಭಾವ ಬೆಳೆಸಬೇಕು ಎಂದು ತಿಳಿಸಿದರು.ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಉತ್ತಮ ಗುರಿ ಹೊಂದಿ, ಪರಿಶ್ರಮದ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಪ್ರೇರಣೆ ನೀಡಿದರು.
ವಿಶೇಷ ಕಾರ್ಯದರ್ಶಿಯವರು ವಿದ್ಯಾರ್ಥಿಗಳೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ನೇರವಾಗಿ ಸಂವಾದ ನಡೆಸಿ ಪಾಠ ಮಾಡಿದುದು ವಿದ್ಯಾರ್ಥಿಗಳಿಗೆ ಉಪಯುಕ್ತ ಹಾಗೂ ಪ್ರೇರಣಾದಾಯಕ ಅನುಭವವಾಯಿತು.
ವರದಿ :-ಮಂಜುನಾಥ ಕುಂಬಾರ
