PV NEWS : ಕುಕನೂರು | ವಾಲ್ಮೀಕಿ ಜಯಂತಿ ವೇಳೆ ತಹಶೀಲ್ದಾರ್ ಗೈರಿಗೆ ಆಕ್ಷೇಪ: ಮುಖಂಡರಿಂದ ಕೆಲ ಕಾಲ ಧರಣಿ! : ಪೊಲೀಸ ಅಧಿಕಾರಿ ಮಧ್ಯಸ್ಥಿಕೆಯಲ್ಲಿ ಸಾಂಕೇತಿಕ ಆಚರಣೆ!
PV NEWS ಕನ್ನಡ 24×7 |
ಕುಕನೂರು, ಅ. 26 : ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ ಹಾಗೂ ಜಯಂತಿ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಗೈರುಹಾಜರಾದುದನ್ನು ಖಂಡಿಸಿ ವಾಲ್ಮೀಕಿ ಸಮುದಾಯದ ಮುಖಂಡರು ಸೋಮವಾರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕೆಲಕಾಲ ಧರಣಿ ನಡೆಸಿದರು. ಬಳಿಕ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆ ಹಿಂಪಡೆದು, ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಾದ ಮನವಿಯೊಂದಿಗೆ ಮುಖಂಡರು ಕಚೇರಿಗೆ ಆಗಮಿಸಿದ್ದರು. ಆದರೆ, ತಹಶೀಲ್ದಾರ್ ಬಸವರಾಜ ಬಣ್ಣೆಶಿರೂರು ಗೈರುಹಾಜರಾಗಿದ್ದು, ದೂರವಾಣಿ ಕರೆಗಳಿಗೂ ಸ್ಪಂದಿಸದಿರುವುದು ಅಸಮಾಧಾನಕ್ಕೆ ಕಾರಣವಾಯಿತು.
ಅಖಿಲ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ರಾಮಣ್ಣ ಮುಂದಲಮನಿ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಸಾಂಕೇತಿಕ ಜಯಂತಿ ಆಚರಣೆಗೆ ನಿರ್ಧರಿಸಲಾಗಿತ್ತು. ಆದರೂ ಪೂರ್ವಭಾವಿ ಸಭೆಗೂ ತಹಶೀಲ್ದಾರರು ಗೈರಾಗಿದ್ದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದರು.
ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಮೌನೇಶ ರಾಠೋಡ್ ಮುಖಂಡರ ಮನವೊಲಿಸಿ ಧರಣಿ ಹಿಂಪಡೆಯುವಂತೆ ಮಾಡಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಮೊದಲ ಕರ್ತವ್ಯವಾಗಿದ್ದು, ಸಹಕರಿಸಿದ ಸಮುದಾಯದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಜ್ಞಾನ, ಶ್ರದ್ಧೆ ಮತ್ತು ಪರಿಶ್ರಮದ ಸಾಧನೆ ಸಮಾಜಕ್ಕೆ ಪ್ರೇರಣೆಯಾಗಿದೆ. ಅವರ ಮಾನವೀಯತೆ, ಸತ್ಯ, ನ್ಯಾಯ ಹಾಗೂ ಸಮಾನತೆಯ ಮೌಲ್ಯಗಳು ಯುವಜನತೆಗೆ ದಾರಿದೀಪವಾಗಲಿ ಎಂದು ಆಶಿಸಿದರು.
ಬಳಿಕ ಗ್ರೇಡ್-2 ತಹಶೀಲ್ದಾರ್ ಮುರುಳಿಧರ್ ರಾವ್ ಕುಲಕರ್ಣಿ, ಬೆಟ್ಟದಪ್ಪ ಮಾಳೆಕೊಪ್ಪ, ಸಿಪಿಐ ಮೌನೇಶ್ವರ ಮಾಲಿ ಪಾಟೀಲ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್ ಉಪಸ್ಥಿತಿಯಲ್ಲಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಲಾಯಿತು.
ಸಮುದಾಯದ ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ, ಸಂಜೀವಪ್ಪ ಸಂಗಟಿ, ಹಂಚಾಳಪ್ಪ ತಳವಾರ, ಮುತ್ತು ವಾಲ್ಮೀಕಿ, ಮಂಗಳೇಶ್ ಮಂಗಳೂರು, ಪ್ರಕಾಶ ತಹಶೀಲ್ದಾರ್, ಮಂಜುನಾಥ್ ಹಾಗೂ ಸಿದ್ದು ವಾಲ್ಮೀಕಿ ಭಾಗವಹಿಸಿದ್ದರು.
“ಅನಾರೋಗ್ಯದ ಕಾರಣದಿಂದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ”