ಬೆಂಗಳೂರು : ಟಿ ನರಸೀಪುರದಲ್ಲಿ ಹಿಂದೂಪರ ಸಂಘಟನೆಯ ಕಾರ್ಯರ್ತ ಹಾಗೂ ಯುವ ಬ್ರಿಗೇಡ್‌ನ ಸದಸ್ಯ ವೇಣುಗೋಪಾಲ್ ಹತ್ಯೆಯ ಹಿಂದೆ ಪ್ರಬಾವಿ ಸಚಿವ ಎಸ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಕೈವಾಡವಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದದಿಗಾರರ ಜೊತೆ ಮಾತನಾಡಿದ ಸೂಲಿಬೆಲೆ, ‘ವೇಣುಗೋಪಾಲ್ ಹತ್ಯೆ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡ ಇದೆ ಹಾಗೂ ಮಹದೇವಪ್ಪ ಮಗ ಸುನೀಲ್ ಬೋಸ್ ತನ್ನ ಸಹಚರರಿಂದ ಈ ಕೆಲಸ ಮಾಡಿಸಿದ್ದಾರೆ ಎಂದು ಹತ್ಯೆಯಾದ ವೇಣುಗೋಪಾಲ್ ಮನೆಯವರು ಮತ್ತು ಸ್ನೇಹಿತರು ಹೇಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ಯುವ ಬ್ರಿಗೇಡ್‌ನ ಸದಸ್ಯ ವೇಣುಗೋಪಾಲ್ ಮೃತದೇಹವನ್ನು ನೋಡಲು ತೆರಳಿದ ಮೊದಲ ದಿನವೇ ಟಿ. ನರಸಿಪುರದ ಸ್ನೇಹಿತರು ಈ ಕೃತ್ಯವನ್ನು ಸುನಿಲ್ ಬೋಸ್ ಕಡೆಯವರು ಮಾಡಿದ್ದಾರೆ ಎಂದು ನನಗೆ ಮಾಹಿತಿ ನೀಡಿದ್ದರು ಎಂದು ಹೇಳಿದರು. ಆದರೆ ಅಧಿಕೃತ ದಾಖಲೆಗಳು ಇಲ್ಲದೇ ಹೇಳುವುದು ಸರಿಯಲ್ಲ ಎಂದು ನಾನು ಸುಮ್ಮನಿದ್ದೇ. ಆದರೆ ಈಗ ಸುನಿಲ್ ಬೋಸ್ ಜೊತೆಗೆ ಆರೋಪಿಗಳ ಇರುವ ಸಂಬಂಧ, ಫೋಟೋಗಳು ಎಲ್ಲವನ್ನು ನೋಡಿದಾಗ ಇದು ದೃಢವಾಗುತ್ತದೆ. ಹತ್ಯೆ ಮಾಡಿದ ಆರೋಪಿಗಳು ಕಾಂಗ್ರೆಸ್ ಪಕ್ಷದವರೆಂದು ಸಾಭೀತಾಗುತ್ತಿದೆ’ ಎಂದರು.