BIG NEWS : ಕುಕನೂರು | ರ್ಯಾವಣಕಿಯಲ್ಲಿ ವಿದ್ಯುತ್ ಮಾರ್ಗದ ಪರಿಹಾರ ತಾರತಮ್ಯ ಆರೋಪ: ರೈತರ ಧರಣಿ ಎರಡನೇ ದಿನಕ್ಕೆ!
ರೈತರ ಹೋರಾಟಕ್ಕೆ ಮಲ್ಲನಗೌಡ ಕೋನಗೌಡ, ಕಳಕಪ್ಪ ಕಂಬಳಿ, ಸುರೇಶ ಬಳೂಟಗಿ ಬೆಂಬಲ!
PV NEWS ಕನ್ನಡ 24×7|
ಕುಕನೂರು, ಅ. 24: ತಾಲ್ಲೂಕಿನ ರ್ಯಾವಣಕಿ ಗ್ರಾಮದಲ್ಲಿ ಹಾದುಹೋಗುವ 220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಕಂಬಗಳ ಅಳವಡಿಕೆ ಹಾಗೂ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಅ. 22ರಂದು ಆರಂಭವಾದ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನಗೌಡ, ಸಮಾಜ ಸೇವಕ ಕಳಕಪ್ಪ ಕಂಬಳಿ ಹಾಗೂ ಸಾಮಾಜಿಕ ಹೋರಾಟಗಾರ ಸುರೇಶ ಬಳೂಟಗಿ ಅವರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ನ್ಯಾಯಯುತ ಪರಿಹಾರ ನೀಡುವಂತೆ ಸರ್ಕಾರ ಹಾಗೂ ಸಂಬಂಧಿಸಿದ ಕಂಪನಿಗಳನ್ನು ಆಗ್ರಹಿಸಿದರು.
ರೈತರ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸಲಿ: ಮಲ್ಲನಗೌಡ ಕೋನಗೌಡ
ಸ್ಥಳೀಯ ಶಾಸಕರು ಹಾಗೂ ಸಚಿವರಾದ ಬಸವರಾಜ ರಾಯರೆಡ್ಡಿ ಅವರು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಮಲ್ಲನಗೌಡ ಕೋನಗೌಡ ಆರೋಪಿಸಿದರು.
ಮೊದಲು ಆರು ಲೈನ್ ವಿದ್ಯುತ್ ಮಾರ್ಗಕ್ಕೆ ಒಪ್ಪಿಗೆ ನೀಡಿದ್ದ ರೈತರಿಗೆ ಈಗ ಹೆಚ್ಚುವರಿ ಲೈನ್ಗಳನ್ನು ಅಳವಡಿಸಲಾಗುತ್ತಿದೆ. ಕಳೆದ ವರ್ಷ ನೀಡಿದ ಪ್ರತಿ ಮೀಟರ್ಗೆ ₹600 ಪರಿಹಾರ ಮುಂದುವರಿಸಬೇಕು. ಪ್ರತಿಯೊಂದು ವಿದ್ಯುತ್ ಕಂಬಕ್ಕೆ ₹40 ಲಕ್ಷದಿಂದ ₹50 ಲಕ್ಷದವರೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಖಾಲಿ ಬಾಂಡ್ಗಳ ಮೇಲೆ ಸಹಿ ಪಡೆದು ರೈತರಿಗೆ ವಂಚಿಸಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದ ಅವರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು. ರೈತರಿಗೆ ನ್ಯಾಯ ದೊರೆಯದಿದ್ದರೆ ಸಚಿವರ ಶಾಸಕರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿದ್ಯುತ್ ಮಾರ್ಗ ಹಾದುಹೋಗುವ ರೈತರಿಗೆ ₹1 ಕೋಟಿ ವಿಮೆ ನೀಡಿ: ಕಳಕಪ್ಪ ಕಂಬಳಿ
ವಿದ್ಯುತ್ ಪ್ರಸರಣ ಮಾರ್ಗದ ಬೃಹತ್ ಟವರ್ಗಳಿಂದ ಕೃಷಿ ಭೂಮಿಯ ಮೌಲ್ಯ ಕುಸಿಯುವ ಆತಂಕವಿದೆ ಎಂದು ಸಮಾಜ ಸೇವಕ ಕಳಕಪ್ಪ ಕಂಬಳಿ ಹೇಳಿದರು.
ವಿದ್ಯುತ್ ಮಾರ್ಗದಿಂದ ಸಂಭವಿಸಬಹುದಾದ ಅವಘಡಗಳ ಹಿನ್ನೆಲೆಯಲ್ಲಿ ಟವರ್ ಹಾದುಹೋಗುವ ಪ್ರತಿಯೊಬ್ಬ ರೈತನಿಗೂ ತಲಾ ₹1 ಕೋಟಿ ವಿಮೆ ಒದಗಿಸಬೇಕು. ಪ್ರತಿ ಟವರ್ಗೆ ₹30 ಲಕ್ಷದಿಂದ ₹40 ಲಕ್ಷದವರೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಮಾರ್ಗದ ಕಾಮಗಾರಿಯಲ್ಲಿ ಭಾಗಿಯಾಗಿರುವ ಕಂಪನಿಗಳು ರೈತರೊಂದಿಗೆ ನೇರವಾಗಿ ಸೂಕ್ತ ಒಪ್ಪಂದ ಮಾಡಿಕೊಂಡು ನ್ಯಾಯಯುತ ಪರಿಹಾರ ನೀಡಬೇಕು. ರೈತರಿಗೆ ಸಮಾನ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ರೈತರ ಮೇಲಿನ ದೌರ್ಜನ್ಯ ತಡೆಯಲು ಆಗ್ರಹ: ಸುರೇಶ ಬಳೂಟಗಿ
ಖಾಸಗಿ ಕಂಪನಿಗಳ ವಿದ್ಯುತ್ ಮಾರ್ಗ ಕಾಮಗಾರಿಯಲ್ಲಿ ರೈತರಿಗೆ ತಾರತಮ್ಯ ಮಾಡಲಾಗುತ್ತಿದೆ. ಕೆಲ ರೈತರಿಗೆ ಪರಿಹಾರ ನೀಡದೆ ವಂಚಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಸುರೇಶ ಬಳೂಟಗಿ ಆರೋಪಿಸಿದರು.
ಸ್ಥಳೀಯ ಪುಡಿ ರೌಡಿಗಳನ್ನು ಬಳಸಿಕೊಂಡು ರೈತರ ಮೇಲೆ ದೌರ್ಜನ್ಯ, ಹಲ್ಲೆ ಹಾಗೂ ಎಫ್ಐಆರ್ ದಾಖಲಿಸುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಸ್ಥಳೀಯ ಆಡಳಿತ ಹಾಗೂ ಸಚಿವರು ತಕ್ಷಣ ಮಧ್ಯಸ್ಥಿಕೆ ವಹಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಪ್ರತಿಯೊಂದು ವಿದ್ಯುತ್ ಕಂಬಕ್ಕೆ ₹40 ಲಕ್ಷದಿಂದ ₹50 ಲಕ್ಷದವರೆಗೆ ಪರಿಹಾರ ನೀಡಿ, ಗ್ರಾಮದ ಸಂತ್ರಸ್ತ ರೈತರಿಗೆ ಸಮಾನ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು.
ರೈತರ ಪ್ರಮುಖ ಬೇಡಿಕೆಗಳು
ವಿದ್ಯುತ್ ಮಾರ್ಗದ ಕಂಬ ಹಾಗೂ ಲೈನ್ಗಳ ಅಳವಡಿಕೆಗೆ ನ್ಯಾಯಯುತ ಪರಿಹಾರ ನೀಡಬೇಕು.
ಪ್ರತಿ ಕಂಬಕ್ಕೆ ₹40 ಲಕ್ಷದಿಂದ ₹50 ಲಕ್ಷದವರೆಗೆ ಪರಿಹಾರ ನೀಡಬೇಕು.
ಕಳೆದ ವರ್ಷ ನೀಡಿದ ಪ್ರತಿ ಮೀಟರ್ಗೆ ₹600 ಪರಿಹಾರ ಮುಂದುವರಿಸಬೇಕು.
ವಿದ್ಯುತ್ ಮಾರ್ಗ ಹಾದುಹೋಗುವ ರೈತರಿಗೆ ತಲಾ ₹1 ಕೋಟಿ ವಿಮೆ ಒದಗಿಸಬೇಕು.
ಖಾಲಿ ಬಾಂಡ್ಗಳ ಮೇಲೆ ಸಹಿ ಪಡೆಯುವ ಆರೋಪದ ಕುರಿತು ತನಿಖೆ ನಡೆಸಬೇಕು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು.
ಧರಣಿಯಲ್ಲಿ ಕರಿಯಪ್ಪ ಚನ್ನದಾಸರ್, ಮಾರುತಿ ಚನ್ನದಾಸರ್, ವಿರೂಪಾಕ್ಷಯ್ಯ ಹಿರೇಮಠ, ಈರಯ್ಯ ಮಠದ, ಮೋದಿನ್ ಸಾಬ್ ಕಿಲ್ಲೆದ್, ಕುಮಾರಯ್ಯ ಮಠದ, ಹನುಮಪ್ಪ ತಳವಾರ, ಶರಣಪ್ಪ ತಳವಾರ, ಈರಪ್ಪ ತಳವಾರ, ಶಂಕ್ರಪ್ಪ ತಿಮ್ಮಣ್ಣನವರ, ಪ್ರವೀಣ್ ತಮ್ಮಣ್ಣನವರ, ಮೈಲಾರಪ್ಪ ಕುದ್ರಿಮೋತಿ, ವೀರನಗೌಡ ಕಬಾಡಿ ಸೇರಿದಂತೆ ಗ್ರಾಮದ ರೈತರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.