ಕರ್ನಾಟಕದಲ್ಲಿ ಹೊಸ ಸರ್ಕಾರದ ಪರ್ವ: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ್ ಪದಗ್ರಹಣಕ್ಕೆ ಕ್ಷಣಗಣನೆ!
PV NEWS :
ಬೆಂಗಳೂರು, ಜೂ. 03 : ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಂದು (ಜೂನ್ 03, 2026) ರಾಜ್ಯಪಾಲರಿಗೆ ಅಧಿಕೃತ ಪತ್ರ ಸಲ್ಲಿಸಿರುವ ಡಿ.ಕೆ. ಶಿವಕುಮಾರ್ ಅವರು, ತಮೂ ಸೇರಿದಂತೆ ಒಟ್ಟು 14 ನಾಯಕರನ್ನೊಳಗೊಂಡ ನೂತನ ಸಚಿವ ಸಂಪುಟಕ್ಕೆ ಪ್ರಮಾಣವಚನ ಬೋಧಿಸುವಂತೆ ಔಪಚಾರಿಕ ವಿನಂತಿ ಸಲ್ಲಿಸಿದ್ದಾರೆ.
ರಾಜ್ಯಪಾಲರಿಗೆ ಪತ್ರ ಸಲ್ಲಿಕೆ:
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ (CLP Leader) ಎಂಬ ಅಧಿಕೃತ ಲೇಟರ್‌ಹೆಡ್‌ನಲ್ಲಿ ಬೆಂಗಳೂರಿನ ಲೋಕಭವನದಲ್ಲಿರುವ ಮಾನ್ಯ ಕರ್ನಾಟಕ ರಾಜ್ಯಪಾಲರಿಗೆ ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ “ಗೌರವಾನ್ವಿತ ರಾಜ್ಯಪಾಲರು ಕೆಳಗೆ ನಮೂದಿಸಲಾದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧಿಸಬೇಕಾಗಿ ವಿನಮ್ರವಾಗಿ ವಿನಂತಿಸುತ್ತೇನೆ” ಎಂದು ಕೋರಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಜವಾಬ್ದಾರಿ ಹೊರಲಿದ್ದರೆ, ಹಿರಿಯ ನಾಯಕರಾದ ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ಒಟ್ಟು 12 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಕಟಿತ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೂತನ ಸಂಪುಟದಲ್ಲಿ ಅನುಭವಿ ಹಿರಿಯ ನಾಯಕರು ಮತ್ತು ಪ್ರಭಾವಿ ಯುವ ನಾಯಕರಿಗೆ ಸಮಾನ ಆದ್ಯತೆ ನೀಡಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್ ಅವರಂತಹ ಹಿರಿಯರ ಅನುಭವದ ಜೊತೆಗೆ ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರಂತಹ ಪ್ರಮುಖ ನಾಯಕರನ್ನು ಒಳಗೊಂಡ ಸಮತೋಲಿತ ಸಂಪುಟವನ್ನು ರಚಿಸಲಾಗಿದೆ. ಕರಾವಳಿ ಭಾಗದಿಂದ ಯು.ಟಿ. ಖಾದರ್ ಹಾಗೂ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಿಂದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಮತ್ತು ಶರಣಪ್ರಕಾಶ್ ಪಾಟೀಲ್ ಅವರಿಗೆ ಸ್ಥಾನ ಕಲ್ಪಿಸುವ ಮೂಲಕ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲಾಗಿದೆ.