LOCAL EXPRESS| ಕುಕನೂರಿನಲ್ಲಿ ಅತ್ಯಾಧುನಿಕ ‘ಪ್ರಜಾಸೌಧ’ ನಿರ್ಮಾಣಕ್ಕೆ ಚಾಲನೆ: ₹18.55 ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಗೆ ಜಿಲ್ಲಾಧಿಕಾರಿಗಳಿಂದ ಭೂಮಿ ಪೂಜೆ
PV NEWS ಕನ್ನಡ 24×7 :
ಕುಕನೂರು, ಜು.17 (PV NEWS) : ಕುಕನೂರು ತಾಲೂಕಿನ ಬಹುಕಾಲದ ಕನಸಾಗಿದ್ದ ಅತ್ಯಾಧುನಿಕ ‘ಪ್ರಜಾಸೌಧ’ (ತಹಸೀಲ್ದಾರ್ ಕಚೇರಿ) ಹಾಗೂ ತಾಲೂಕು ಪಂಚಾಯತ್ ಆಡಳಿತ ಕಚೇರಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಇಂದು ಅಧಿಕೃತ ಚಾಲನೆ ದೊರೆಯಿತು. ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ₹18.55 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಗೆ ಹಸಿರು ನಿಶಾನೆ ತೋರಿಸಿದರು.
ಕುಕನೂರು ಪಟ್ಟಣದ ರುದ್ರಮುನೇಶ್ವರ ದೇವಸ್ಥಾನದ ಗುದ್ನೇಪ್ಪನ ಮಠದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಸರ್ವೆ ನಂ.78ರ ಸುಮಾರು 16 ಎಕರೆ ಜಾಗದಲ್ಲಿ ಈ ಭವ್ಯ ಆಡಳಿತ ಸೌಧ ನಿರ್ಮಾಣವಾಗಲಿದೆ. ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯತ್ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳು ಒಂದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುವಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕಟ್ಟಡ ನಿರ್ಮಾಣಗೊಳ್ಳಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಒಂದೇ ಸೂರಿನಡಿ ವಿವಿಧ ಸರ್ಕಾರಿ ಸೇವೆಗಳು ಲಭ್ಯವಾಗಲಿದ್ದು, ಆಡಳಿತಾತ್ಮಕ ಕಾರ್ಯಕ್ಷಮತೆಯೂ ಹೆಚ್ಚುವ ನಿರೀಕ್ಷೆಯಿದೆ.
ಜಮೀನಿನ ವಿವಾದಕ್ಕೆ ಜಿಲ್ಲಾಧಿಕಾರಿಗಳ ಸ್ಪಷ್ಟನೆ..!!
ಭೂಮಿ ಪೂಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರು, ಜಮೀನಿನ ಕುರಿತಂತೆ ಉದ್ಭವಿಸಿದ್ದ ಕಾನೂನು ಗೊಂದಲಗಳ ಕುರಿತು ಸ್ಪಷ್ಟನೆ ನೀಡಿದರು.
“ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಗೆ ಸೇರಿದ ಈ ಜಮೀನನ್ನು ನಿಯಮಾನುಸಾರ ಲೀಸ್ ಆಧಾರದ ಮೇಲೆ ಪ್ರಜಾಸೌಧ, ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ಉಪನೋಂದಣಾಧಿಕಾರಿಗಳ ಕಚೇರಿ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರ ಅನುಮೋದಿಸಿದೆ. ಈ ವಿಷಯವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಸವಾಲುಗಳಿದ್ದರೂ, ಹೈಕೋರ್ಟ್ ವಕೀಲರು ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕವೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಜನತೆಗೆ ಏನು ಲಾಭ?
ನೂತನ ಪ್ರಜಾಸೌಧ ನಿರ್ಮಾಣದಿಂದ ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯತ್ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳು ಒಂದೇ ಆವರಣದಲ್ಲಿ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ವಿವಿಧ ಸೇವೆಗಳಿಗಾಗಿ ಬೇರೆ ಬೇರೆ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಆಡಳಿತಾತ್ಮಕ ಸೇವೆಗಳು ಮತ್ತಷ್ಟು ಸುಗಮವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕುಕನೂರು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬೆಟದೇಶ ಮಾಳೆಕೊಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್, ಲೋಕೋಪಯೋಗಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಟ್ಟಣದ ಹಿರಿಯ ಮುಖಂಡರಾದ ಸತ್ಯನಾರಾಯಣಪ್ಪ ಹರಪನಹಳ್ಳಿ, ಹನುಮಂತಗೌಡ ಚಂಡೂರು, ವೀರಯ್ಯ ದಳಪತಿ, ಶರಣಪ್ಪ ಗಾಂಜಿ, ಸಂಗಮೇಶ್ ಗುತ್ತಿ, ದಾನರೆಡ್ಡಿ, ವಿವಿಧ ಇಲಾಖೆಗಳ ಸಿಬ್ಬಂದಿ, ರೈತ ಮುಖಂಡರು, ಸಾರ್ವಜನಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.