PV NEWS : ಮದುವೆ ಮಾಡಿಸುವಂತೆ ಪಟ್ಟು: ಮೊಬೈಲ್ ಟವರ್ ಏರಿದ ಯುವಕ..!
PV NEWS ಕನ್ನಡ 24×7:
ಗಂಗಾವತಿ, ಆ.31: ತಾನು ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸಬೇಕೆಂದು ಪಟ್ಟು ಹಿಡಿದ ಯುವಕನೊಬ್ಬ ನಗರದ ಎಪಿಎಂಸಿ ಗಂಜ್ ಪ್ರದೇಶದಲ್ಲಿ ನೂರಾರು ಅಡಿ ಎತ್ತರದ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ತಾಲ್ಲೂಕಿನ ಹಣವಾಳ ಗ್ರಾಮದ ಯುವಕ ಎಂದು ಗುರುತಿಸಲಾಗಿರುವ ಈತ, ಎಪಿಎಂಸಿ ಗಂಜ್‌ನ ರಿಲಯನ್ಸ್ ಮಾರ್ಟ್ ಸಮೀಪದ ಮೊಬೈಲ್ ಟವರ್ ಏರಿದ್ದಾನೆ. ಆರಂಭದಲ್ಲಿ ಸ್ಥಳೀಯರು ಮೊಬೈಲ್ ಕಂಪನಿಯ ಸಿಬ್ಬಂದಿ ಟವರ್ ದುರಸ್ತಿ ಕಾರ್ಯಕ್ಕಾಗಿ ಏರಿರಬಹುದು ಎಂದು ಭಾವಿಸಿದ್ದರು. ಆದರೆ, ಟವರ್‌ನ ತುದಿಗೆ ತೆರಳಿದ ಯುವಕ ಕೆಳಗಿದ್ದವರನ್ನು ಉದ್ದೇಶಿಸಿ ಕೂಗಲು ಆರಂಭಿಸಿದ ಬಳಿಕ ವಿಷಯ ಬೆಳಕಿಗೆ ಬಂದಿದೆ.
‘ನಾನು ಪ್ರೀತಿಸಿದ ಯುವತಿಯನ್ನು ನನಗೆ ಕೊಟ್ಟು ಮದುವೆ ಮಾಡಿಸಬೇಕು. ಇಲ್ಲವಾದರೆ ಇಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಆತ ಹೇಳುತ್ತಿದ್ದುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು. ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನ ಮನವೊಲಿಸಿ ಕೆಳಗಿಳಿಸಲು ಪ್ರಯತ್ನಿಸಿದರು. ಆದರೆ, ಯುವಕ ಟವರ್‌ನಿಂದ ಇಳಿಯಲು ನಿರಾಕರಿಸಿದ್ದು, ಕೆಲಕಾಲ ಟವರ್ ಮೇಲೆಯೇ ಮಲಗಿದ್ದಾನೆ.
ಘಟನೆ ನಡೆದು ಎರಡು–ಮೂರು ಗಂಟೆಗಳು ಕಳೆದರೂ ಯುವಕ ಕೆಳಗಿಳಿಯದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಆತನ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದರು.