PV NEWS : ಕೊಪ್ಪಳ | ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ!
ಅಂಬೇಡ್ಕರ್ ಎಸ್‌ಸಿ–4 ವಸತಿ ನಿಲಯದ ವಿದ್ಯಾರ್ಥಿಗಳ ಪ್ರತಿಭಟನೆ; 15 ದಿನದಲ್ಲಿ ಸ್ಪೋರ್ಟ್ಸ್ ಕಿಟ್ ನೀಡುವ ಭರವಸೆ
PV NEWS ಕನ್ನಡ 24×7
ಕೊಪ್ಪಳ, ಆ. 31 : ನಗರದ ಡಾ. ಬಿ.ಆರ್. ಅಂಬೇಡ್ಕರ್ ಎಸ್‌ಸಿ–4 ವಸತಿ ನಿಲಯದ ವಿದ್ಯಾರ್ಥಿಗಳ ವಿವಿಧ ಮೂಲಭೂತ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ, ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಂದು ಬೆಳಿಗ್ಗೆ 10.30ಕ್ಕೆ ಆರಂಭವಾದ ಪ್ರತಿಭಟನೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ತಮ್ಮ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾದರೂ, ಅಧಿಕಾರಿಗಳು ತಡವಾಗಿ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ನಂತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.
ಅಧಿಕಾರಿಗಳು ಕೇವಲ ಮನವಿ ಸ್ವೀಕರಿಸಿ ತೆರಳಲು ಮುಂದಾದಾಗ ವಿದ್ಯಾರ್ಥಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ತಮ್ಮ ಸಮಸ್ಯೆಗಳ ಕುರಿತು ಸ್ಥಳದಲ್ಲೇ ಚರ್ಚಿಸಿ, ಪರಿಹಾರದ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.
ಮೂರು–ನಾಲ್ಕು ತಿಂಗಳಿಂದ ಸೋಪ್ ಕಿಟ್ ವಿತರಣೆ ಇಲ್ಲ
ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕಳೆದ ಮೂರು–ನಾಲ್ಕು ತಿಂಗಳಿಂದ ಸೋಪ್ ಕಿಟ್‌ಗಳನ್ನು ನೀಡಿಲ್ಲ. ಅಲ್ಲದೆ, ಶುದ್ಧ ಕುಡಿಯುವ ನೀರಿನ ಸಮಸ್ಯೆಯೂ ಇದೆ. ನೀರಿನ ಸಂಪನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದ ಪರಿಣಾಮ ಹಲವು ವಿದ್ಯಾರ್ಥಿಗಳಿಗೆ ಕೈ–ಕಾಲುಗಳಲ್ಲಿ ತುರಿಕೆ ಹಾಗೂ ಅಲರ್ಜಿ ಕಾಣಿಸಿಕೊಂಡಿದೆ ಎಂದು ವಿದ್ಯಾರ್ಥಿಗಳು ದೂರಿದರು.
ವಿದ್ಯಾರ್ಥಿಗಳಿಗೆ ನೀಡಬೇಕಾದ ಸ್ಪೋರ್ಟ್ಸ್ ಕಿಟ್‌ಗಳು ಇದುವರೆಗೆ ವಿತರಿಸಲಾಗಿಲ್ಲ. ವಸತಿ ನಿಲಯದ ಸ್ವಚ್ಛತೆ ಹಾಗೂ ಗ್ರಂಥಾಲಯದ ಸ್ವಚ್ಛತೆಯೂ ಸಮರ್ಪಕವಾಗಿಲ್ಲ. ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಾರ್ಡನ್ ವಿರುದ್ಧವೂ ಅಸಮಾಧಾನ..!
ವಸತಿ ನಿಲಯದ ವಾರ್ಡನ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸಮರ್ಪಕವಾಗಿ ಆಲಿಸುತ್ತಿಲ್ಲ. ಅಲ್ಲದೆ, ವಸತಿ ನಿಲಯಕ್ಕೆ ನಿಯಮಿತವಾಗಿ ಭೇಟಿ ನೀಡದಿರುವುದರಿಂದ ಸಮಸ್ಯೆಗಳು ಮುಂದುವರಿಯುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸದ ವಾರ್ಡನ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
15 ದಿನದಲ್ಲಿ ಸ್ಪೋರ್ಟ್ಸ್ ಕಿಟ್: ಅಧಿಕಾರಿ ಭರವಸೆ
ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಂಜನೇಪ್ಪ ಅವರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಿದ ಅವರು, ಅದೇ ದಿನ ಎಲ್ಲಾ ವಿದ್ಯಾರ್ಥಿಗಳಿಗೆ ಸೋಪ್ ಹಾಗೂ ಕಿಟ್ ಬಾಕ್ಸ್‌ಗಳನ್ನು ವಿತರಿಸಲಾಗುವುದು. 15 ದಿನಗಳೊಳಗೆ ಸ್ಪೋರ್ಟ್ಸ್ ಕಿಟ್‌ಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ವಸತಿ ನಿಲಯದಲ್ಲಿನ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಉಳಿದ ಸಮಸ್ಯೆಗಳನ್ನೂ ಪರಿಶೀಲಿಸಿ ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಸಾಂಕೇತಿಕವಾಗಿ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಎಐಡಿವೈಓ ಹೋರಾಟಗಾರ ಶರಣು ಗಡ್ಡಿ, ವಿದ್ಯಾರ್ಥಿ ಮುಖಂಡ ಪ್ರದೀಪ್, ವಿದ್ಯಾರ್ಥಿಗಳಾದ ದುರುಗೇಶ್ ಎಂ., ಶರಣಬಸವ, ಮಲ್ಲಿಕಾರ್ಜುನ, ಪರಶುರಾಮ, ಶ್ರೀಕಾಂತ, ಕೋಟೇಶ್, ಸುಭಾಸ್, ಭಾಗೇಶ್, ಶರಣಪ್ಪ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.