BREAKING : ಕುಕನೂರು | ವೈದ್ಯನ ವಿರುದ್ಧ ಅತ್ಯಾಚಾರ ಆರೋಪ; FIR ದಾಖಲು..!
ರಾವಣಕಿ ಗ್ರಾಮದ ಕ್ಲಿನಿಕ್‌ನಲ್ಲಿ ಘಟನೆ ಎನ್ನಲಾಗಿದ್ದು, BNSನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ — FIR No.113/2026
PV NEWS ಕನ್ನಡ 24×7 | ಕುಕನೂರು, ಸೆ.18:
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರಾವಣಕಿ ಗ್ರಾಮದಲ್ಲಿ ಇತ್ತೀಚಿಗೆ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಡಿ RMP ವೈದ್ಯನ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ FIR (No.113/2026) ದಾಖಲಾಗಿದೆ.
ಪ್ರಾಥಮಿಕ ಮಾಹಿತಿಯಂತೆ, ಚಿಕಿತ್ಸೆಗಾಗಿ ಕ್ಲಿನಿಕ್‌ಗೆ ತೆರಳಿದ್ದ ಮಹಿಳೆ (ವಯಸ್ಸು 43)ಗೆ ಆರೋಪಿ ಡಾ.ಪ್ರಭುರಾಜ್ ಶೆಟ್ಟರ್ (ವಯಸ್ಸು 47)ವೈದ್ಯ ಇಂಜೆಕ್ಷನ್ ನೀಡಿದ ಬಳಿಕ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿತ ವೈದ್ಯರು ಕುಡಿತದ ಅಮಲಿನಲ್ಲಿದ್ದ ವೇಳೆ ಕೃತ್ಯಕ್ಕೆ ಯತ್ನಿಸಿದ್ದಾರೆ ಎಂಬ ಮಾಹಿತಿಯೂ ಕೇಳಿಬಂದಿದ್ದು, ಇದರ ಸತ್ಯಾಸತ್ಯತೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಇಂಜೆಕ್ಷನ್ ಬಳಿಕ ದೌರ್ಜನ್ಯಕ್ಕೆ ಯತ್ನದ ಆರೋಪ
ಮಹಿಳೆಗೆ ನಿದ್ರೆ ಉಂಟುಮಾಡುವ ಅಥವಾ ಪ್ರಜ್ಞೆ ಕುಂದಿಸುವ ಇಂಜೆಕ್ಷನ್ ನೀಡಲಾಗಿತ್ತು ಎನ್ನಲಾಗಿದ್ದು, ಬಳಿಕ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ವೇಳೆ ಮಹಿಳೆಯ ಕುಟುಂಬದ ಸದಸ್ಯರೊಬ್ಬರು ವಿಷಯ ಗಮನಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ವಿವಿಧ BNS ಸೆಕ್ಷನ್‌ಗಳಡಿ ಪ್ರಕರಣ..!
ಈ ಸಂಬಂಧ BNS ಸೆಕ್ಷನ್ 74, 75(2), 351(2), 64 ಮತ್ತು 62 ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಬಂದಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಮಹಿಳೆಯ ಹೇಳಿಕೆ, ವೈದ್ಯಕೀಯ ಪರೀಕ್ಷಾ ವರದಿ, ಇಂಜೆಕ್ಷನ್ ಹಾಗೂ ಔಷಧಿಗಳ ವಿವರ, ಸಾಕ್ಷಿಗಳ ಹೇಳಿಕೆ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ, ಪ್ರಕರಣ ದಾಖಲಾಗಿರುವುದು ತಿಳಿದುಬಂದ ಬಳಿಕ ಆರೋಪಿ ಪ್ರಭುರಾಜ್ ಶೆಟ್ಟರ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ.
ಆರೋಪಗಳು ತನಿಖೆಯಲ್ಲಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಿತ ವ್ಯಕ್ತಿಯನ್ನು ಆರೋಪಿತನಾಗಿಯೇ ಪರಿಗಣಿಸಬೇಕು.