BIG NEWS : ಅನ್ನಭಾಗ್ಯ ಅಕ್ಕಿ ಕಾಳಸಂತೆ ಜಾಲ ಪತ್ತೆ; ₹15 ಕೋಟಿ ಮೌಲ್ಯದ ಸ್ವತ್ತು ಜಪ್ತಿ!
ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆ; 266 ಮಂದಿ ಬಂಧನ!
PV NEWS ಕನ್ನಡ 24×7|
ಬೆಂಗಳೂರು: ಬಡ ಹಾಗೂ ಅರ್ಹ ಕುಟುಂಬಗಳಿಗೆ ವಿತರಿಸಬೇಕಾದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲದ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಸರಣಿ ದಾಳಿಗಳಲ್ಲಿ ₹8.80 ಕೋಟಿ ಮೌಲ್ಯದ 32,384 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಅಕ್ಕಿ ಸೇರಿದಂತೆ ಅಕ್ರಮ ದಂಧೆಗೆ ಬಳಸುತ್ತಿದ್ದ ವಾಹನಗಳು, ಅಡುಗೆ ಅನಿಲ ಸಿಲಿಂಡರ್ಗಳು, ಪೆಟ್ರೋಲ್ ಮತ್ತು ಡೀಸೆಲ್ ಸೇರಿ ಒಟ್ಟು ಸುಮಾರು ₹15 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ 266 ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
220 ವಾಹನಗಳು ವಶಕ್ಕೆ
ಅಕ್ರಮ ಸಾಗಣೆ ಮತ್ತು ಮಾರಾಟಕ್ಕೆ ಬಳಸುತ್ತಿದ್ದ ₹6.17 ಕೋಟಿ ಮೌಲ್ಯದ 220 ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 1,817 ಎಲ್ಪಿಜಿ ಸಿಲಿಂಡರ್ಗಳು ಹಾಗೂ 14,258 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ನ್ನೂ ಜಪ್ತಿ ಮಾಡಲಾಗಿದೆ.
ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಕ್ಕಿ ಜಪ್ತಿ…!
ಜಿಲ್ಲಾವಾರು ಅಕ್ರಮ ಅಕ್ಕಿ ಜಪ್ತಿ ಪ್ರಮಾಣದಲ್ಲಿ ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಕೋಲಾರದಲ್ಲಿ ₹3.81 ಕೋಟಿ ಮೌಲ್ಯದ ಅಕ್ಕಿ ಪತ್ತೆಯಾಗಿದ್ದರೆ, ಬೆಳಗಾವಿಯಲ್ಲಿ ₹1.57 ಕೋಟಿ, ಕಲಬುರಗಿಯಲ್ಲಿ ₹1.49 ಕೋಟಿ, ವಿಜಯಪುರದಲ್ಲಿ ₹1.02 ಕೋಟಿ ಹಾಗೂ ಬಾಗಲಕೋಟೆಯಲ್ಲಿ ₹91.62 ಲಕ್ಷ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಉದ್ದೇಶಕ್ಕೆ ಧಕ್ಕೆ ತಂದು, ಬಡವರ ಪಾಲಿನ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಅಕ್ರಮ ಜಾಲಗಳ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಮುಂದಿನ ದಿನಗಳಲ್ಲಿಯೂ ದಾಳಿ ಮುಂದುವರಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.