You are currently viewing BREAKING NEWS : ನಿವೇಶನ ವಿವಾದ ಕಗ್ಗಂಟು: ಮಾಲೀಕ ಸಾವು, ಆರೋಪಿಗಳ ಬಂಧನಕ್ಕೆ ಆಗ್ರಹ! 

BREAKING NEWS : ನಿವೇಶನ ವಿವಾದ ಕಗ್ಗಂಟು: ಮಾಲೀಕ ಸಾವು, ಆರೋಪಿಗಳ ಬಂಧನಕ್ಕೆ ಆಗ್ರಹ! 

BREAKING NEWS : ನಿವೇಶನ ವಿವಾದ ಕಗ್ಗಂಟು: ಮಾಲೀಕ ಸಾವು, ಆರೋಪಿಗಳ ಬಂಧನಕ್ಕೆ ಆಗ್ರಹ! 

PV NEWS ಕನ್ನಡ 24×7

ಕನಕಗಿರಿ, ಆ.17: ಸ್ವಂತ ನಿವೇಶನದ ಒತ್ತುವರಿ ತೆರವುಗೊಳಿಸುವಂತೆ ಪೊಲೀಸ್ ಠಾಣೆ ಹಾಗೂ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂಬ ಆರೋಪದ ನಡುವೆ, ನಿವೇಶನ ವಿವಾದಕ್ಕೆ ಸಂಬಂಧಿಸಿದ ಬೆದರಿಕೆ ಹಾಗೂ ಮಾನಸಿಕ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬರು ಕೀಟನಾಶಕ ಸೇವಿಸಿ ಮೃತಪಟ್ಟಿರುವ ಘಟನೆ ಕನಕಗಿರಿ ಪಟ್ಟಣದ 5ನೇ ವಾರ್ಡ್‌ನಲ್ಲಿ ನಡೆದಿದೆ.

ಮೃತರನ್ನು ಬಸವರಾಜರೆಡ್ಡಿ ಮಾದಿನಾಳ (40) ಎಂದು ಗುರುತಿಸಲಾಗಿದೆ. ಪಟ್ಟಣದ ಸರ್ವೇ ನಂ.5ರಲ್ಲಿ ಬಸವರಾಜರೆಡ್ಡಿ ಅವರಿಗೆ ಸೇರಿದ ನಿವೇಶನವಿದ್ದು, ಖಾಲಿ ಜಾಗವನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪಕ್ಕದ ಜಮೀನಿನ ಮಾಲೀಕರಾದ ಮಹಾಬಲಸಾಬ್ ಬಿಳೇಕುದುರಿ, ಹುಸೇನಸಾಬ್, ದಾದಾಪೀರ್, ಶಹಾಬುದ್ದೀನ್ ಖಾಜಾ ಸೇರಿದಂತೆ ಕೆಲವರು ಮನೆಗೆ ನುಗ್ಗಿ ದೌರ್ಜನ್ಯ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ನಿವೇಶನ ಬಿಟ್ಟುಕೊಡುವಂತೆ ಒತ್ತಡ ಹೇರಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನಿವೇಶನದ ಒತ್ತುವರಿ ತೆರವುಗೊಳಿಸುವಂತೆ ಬಸವರಾಜರೆಡ್ಡಿ ಅವರು ಪೊಲೀಸ್ ಠಾಣೆ ಹಾಗೂ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಆ.11 ಮತ್ತು 12ರಂದು ಆರೋಪಿಗಳು ಗುಂಪಾಗಿ ಬಂದು ದೌರ್ಜನ್ಯ ನಡೆಸಿದ್ದರು. ಈ ಕುರಿತು ಪೊಲೀಸರ ಗಮನಕ್ಕೆ ತಂದಿದ್ದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮೃತರ ಪತ್ನಿ ರಾಧಿಕಾ ಆರೋಪಿಸಿದ್ದಾರೆ. ಅಲ್ಲದೆ, ಪತ್ನಿ ಹಾಗೂ ಮಕ್ಕಳಿಗೆ ಅಪಾಯ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆ.15ರಂದು ಬೆಳಗ್ಗೆ ಜಮೀನಿಗೆ ತೆರಳಿದ್ದ ಬಸವರಾಜರೆಡ್ಡಿ ಅವರು ಕೀಟನಾಶಕ ಸೇವಿಸಿದ್ದರು ಎನ್ನಲಾಗಿದೆ. ವಿಷಯ ತಿಳಿದ ಸ್ನೇಹಿತರು ಕೂಡಲೇ ಅವರನ್ನು ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮೃತರ ಪತ್ನಿ ರಾಧಿಕಾ ಮಾತನಾಡಿ, ‘ನನ್ನ ಪತಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ದೌರ್ಜನ್ಯ ಹಾಗೂ ಬೆದರಿಕೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ. ನನ್ನ ಪತಿಯ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಕಣ್ಣೀರಿಟ್ಟಿದ್ದಾರೆ.

‘ಶವ ಬರುವ ಮುನ್ನವೇ ಆರೋಪಿಗಳ ಬಂಧನವಾಗಲಿ’

ಮುಖಂಡ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ‘ಬಸವರಾಜರೆಡ್ಡಿ ಅವರ ಶವ ಧಾರವಾಡದಿಂದ ಪಟ್ಟಣಕ್ಕೆ ಬರುವಷ್ಟರಲ್ಲಿ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಶವದೊಂದಿಗೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು. ಆರೋಪಿಗಳ ವಿರುದ್ಧ ಈ ಹಿಂದೆಯೂ ಪ್ರಕರಣಗಳಿದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿಲ್ಲ. ಆರೋಪಿಗಳನ್ನು ಬಂಧಿಸುವವರೆಗೆ ಅಂತ್ಯಸಂಸ್ಕಾರ ನಡೆಸುವುದಿಲ್ಲ’ ಎಂದು ಎಚ್ಚರಿಸಿದರು.

ಪೊಲೀಸ್ ತನಿಖೆ ಚುರುಕು

ಕನಕಗಿರಿ ಠಾಣೆಯ ಪಿಐ ವಿ. ನಾರಾಯಣ ಮಾತನಾಡಿ, ‘ನಿವೇಶನ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಳ್ಳಲಾಗುತ್ತಿದೆ. ಸಿಡಿಆರ್, ಸಿಸಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮೃತರ ಪತ್ನಿ ರಾಧಿಕಾ ಅವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು’ ಎಂದು ತಿಳಿಸಿದ್ದಾರೆ.

ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಕುಟುಂಬಸ್ಥರು ಮಾಡಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

Prajavikshane

Chandru R Bhanapaur

Leave a Reply

error: Content is protected !!