You are currently viewing PV NEWS : ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ದಾರಿ: ಸೋಮಶೇಖರ ನಿಲೋಗಲ್

PV NEWS : ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ದಾರಿ: ಸೋಮಶೇಖರ ನಿಲೋಗಲ್

PV NEWS : ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ದಾರಿ: ಸೋಮಶೇಖರ ನಿಲೋಗಲ್

PV NEWS ಕನ್ನಡ 24×7: 

ಕುಕನೂರು, ಆ. 16 : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಾಜವು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವನ್ನು ನೀಡುವುದು ಅಗತ್ಯ ಎಂದು ವಿದ್ಯಾನಂದ ಗುರುಕುಲ ಪ್ರೌಢಶಾಲೆಯ ಉಪಪ್ರಾಂಶುಪಾಲ ಸೋಮಶೇಖರ ನಿಲೋಗಲ್ ಹೇಳಿದರು.

ತಾಲ್ಲೂಕಿನ ಕಕ್ಕಿಹಳ್ಳಿ ತಾಂಡಾದಲ್ಲಿ ನಡೆದ ಗೋರ ಸಿಕವಾಡಿ ಸಾಮಾಜಿಕ ಚಳವಳಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದಿವಂಗತ ಕಾಶಿನಾಥ ರಾಠೋಡ ಅವರ ತ್ಯಾಗ, ಸೇವಾ ಮನೋಭಾವದಿಂದ ರೂಪುಗೊಂಡ ಗೋರ ಸಿಕವಾಡಿ ಚಳವಳಿ ಇಂದು ದೇಶದಾದ್ಯಂತ ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿದೆ. ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶ್ರೀಮಂತ ಸಂಸ್ಕೃತಿ ಹೊಂದಿರುವ ಬಂಜಾರ ಸಮುದಾಯ ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದೆ. ಸಮನ್ವಯದ ಕೊರತೆಯಿಂದಾಗಿ ಸಮಾಜ ಹರಿದು ಹಂಚಿಹೋಗಿ, ಮತಾಂತರ ಸೇರಿದಂತೆ ಹಲವು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಸಮಾಜವನ್ನು ಒಗ್ಗೂಡಿಸುವಲ್ಲಿ ಕಾಶಿನಾಥ ರಾಠೋಡ ಅವರ ಪಾತ್ರ ಮಹತ್ವದ್ದಾಗಿದೆ’ ಎಂದರು.

‘ಸಾಮಾನ್ಯ ವ್ಯಕ್ತಿಯೊಬ್ಬರು ಸಂಕಲ್ಪ ಮಾಡಿದರೆ ಸಮಾಜದಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಗೋರ ಸಿಕವಾಡಿ ಚಳವಳಿಯೇ ಸಾಕ್ಷಿ. ದೇಶ ಮಾತ್ರವಲ್ಲದೆ ವಿಶ್ವದ ವಿವಿಧೆಡೆ ನೆಲೆಸಿರುವ ಬಂಜಾರ ಸಮಾಜವನ್ನು ಚಳವಳಿಯೊಂದಿಗೆ ಬೆಸೆಯಲು ಕಾಶಿನಾಥ ರಾಠೋಡ ಅವರು ಪಟ್ಟ ಶ್ರಮ, ಎದುರಿಸಿದ ನೋವು ಮತ್ತು ಅವಮಾನಗಳು ಅಪಾರ. ಅವುಗಳನ್ನೆಲ್ಲ ಮೆಟ್ಟಿನಿಂತು ಲಕ್ಷಾಂತರ ಕಾರ್ಯಕರ್ತರನ್ನು ರೂಪಿಸಿದ ಅವರ ಸೇವೆ ಅವಿಸ್ಮರಣೀಯ’ ಎಂದು ಹೇಳಿದರು.

‘ರಾಠೋಡ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ತೋರಿಸಿಕೊಟ್ಟ ಮಾರ್ಗ, ತಿಳಿಸಿದ ವಿಚಾರಗಳು ಹಾಗೂ ಕಲಿಸಿದ ಸಂಸ್ಕಾರ, ಸಂಸ್ಕೃತಿ ಮತ್ತು ಆಚಾರ–ವಿಚಾರಗಳು ಎಂದೆಂದಿಗೂ ಅಜರಾಮರ. ಸಾಮಾಜಿಕ ಚಳವಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರೂ ಒಗ್ಗೂಡಿ ಸಮಾಜವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದಾಗ ಮಾತ್ರ ಅವರ ಶ್ರಮ ಸಾರ್ಥಕವಾಗುತ್ತದೆ’ ಎಂದರು.

ಪತ್ರಕರ್ತ ಚಂದ್ರು ಭಾನಾಪೂರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮೇಘರಾಜ ಬಳಗೇರಿ, ಹಂಪಣ್ಣ ಕಟ್ಟಿಮನಿ, ಯಮನೂರಪ್ಪ ಕಟ್ಟಿಮನಿ, ಯಮನೂರಪ್ಪ ಭಾನಾಪುರ, ರಾಘವೇಂದ್ರ ಬಳಗೇರಿ, ನಾಗರಾಜ ಭಾನಾಪುರ, ಪ್ರಕಾಶ ಬಳಗೇರಿ, ಮಹೇಶ ಕಾರಭಾರಿ, ಆನಂದ ರಾಠೋಡ, ಎಲ್ಲಪ್ಪ ಕಾರಭಾರಿ, ಲಿಂಬಣ್ಣ ನಾಯಕ, ಆನಂದ ನಾಯಕ, ಲಕ್ಷ್ಮಣ ನಾಯಕ, ವಿಜಯ ಚವ್ಹಾಣ, ಶಶಿಕುಮಾರ ಕಾರಭಾರಿ, ಕಿರಣ ರಾಠೋಡ, ಕೃಷ್ಣ ಕಾರಭಾರಿ, ಪರಸಪ್ಪ ಕಾರಭಾರಿ, ಕಿರಣ ಕಾರಭಾರಿ ಸೇರಿದಂತೆ ತಾಂಡಾದ ನಾಗರಿಕರು ಭಾಗವಹಿಸಿದ್ದರು.

Prajavikshane

Chandru R Bhanapaur

Leave a Reply

error: Content is protected !!