You are currently viewing BREAKING : “ನೂರಾರು ಕೋಟಿ ಬೇಕು, ಅನುದಾನವೇ ಇಲ್ಲ”: ಕೊಪ್ಪಳ ಸೇರಿ ಹೊಸ ವಿಶ್ವವಿದ್ಯಾಲಯಗಳ ಸ್ಥಿತಿ ಕುರಿತು ಸಚಿವ ರಾಯರೆಡ್ಡಿ ಹೇಳಿಕೆ!

BREAKING : “ನೂರಾರು ಕೋಟಿ ಬೇಕು, ಅನುದಾನವೇ ಇಲ್ಲ”: ಕೊಪ್ಪಳ ಸೇರಿ ಹೊಸ ವಿಶ್ವವಿದ್ಯಾಲಯಗಳ ಸ್ಥಿತಿ ಕುರಿತು ಸಚಿವ ರಾಯರೆಡ್ಡಿ ಹೇಳಿಕೆ!

BREAKING : “ನೂರಾರು ಕೋಟಿ ಬೇಕು, ಅನುದಾನವೇ ಇಲ್ಲ”: ಕೊಪ್ಪಳ ಸೇರಿ ಹೊಸ ವಿಶ್ವವಿದ್ಯಾಲಯಗಳ ಸ್ಥಿತಿ ಕುರಿತು ಸಚಿವ ರಾಯರೆಡ್ಡಿ ಹೇಳಿಕೆ!

ಕೊಪ್ಪಳ ವಿಶ್ವವಿದ್ಯಾಲಯದ ಭವಿಷ್ಯವೂ ಸಂಪುಟದ ಚರ್ಚೆಗೆ? ಮೂಲಸೌಕರ್ಯ, ಸಿಬ್ಬಂದಿ ಕೊರತೆ ನಡುವೆ ಆತಂಕ!

PV NEWS ಕನ್ನಡ 24×7

ಕುಕನೂರು, ಆ. 16 : ಕೊಪ್ಪಳ ಸೇರಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಆರಂಭಿಸಲಾಗಿರುವ ಏಳು ಹೊಸ ವಿಶ್ವವಿದ್ಯಾಲಯಗಳ ಭವಿಷ್ಯದ ಕುರಿತು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಹಂತದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಕುಕನೂರು ಪಟ್ಟಣದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹೊಸದಾಗಿ ಆರಂಭಿಸಿರುವ ವಿಶ್ವವಿದ್ಯಾಲಯಗಳ ಪೈಕಿ ಹಲವು ಸಂಸ್ಥೆಗಳಿಗೆ ಸ್ವಂತ ಕಟ್ಟಡ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾಲಯಗಳನ್ನು ಮುಂದುವರಿಸುವುದು ಹಾಗೂ ಅವುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ಅಂಶಗಳನ್ನು ಸರ್ಕಾರ ಪರಿಶೀಲಿಸಬೇಕಾಗಿದೆ ಎಂದರು.

ಹೊಸ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿ ಅದನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಲು ನೂರಾರು ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಪ್ರಸ್ತುತ ಸರ್ಕಾರಕ್ಕೆ ಅಗತ್ಯ ಪ್ರಮಾಣದ ಅನುದಾನದ ಕೊರತೆಯೂ ಇದೆ. ಹೀಗಾಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮಾತ್ರವಲ್ಲದೆ, ಅವುಗಳ ನಿರ್ವಹಣೆ, ಕಟ್ಟಡ, ಸಿಬ್ಬಂದಿ ಹಾಗೂ ಇತರ ಮೂಲಸೌಕರ್ಯಗಳಿಗೆ ಅಗತ್ಯವಿರುವ ಹಣಕಾಸಿನ ವ್ಯವಸ್ಥೆಯನ್ನೂ ಪರಿಗಣಿಸಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು.

ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕವಾದ ಆವರಣ ಹಾಗೂ ಸುಸಜ್ಜಿತ ಸ್ವಂತ ಕಟ್ಟಡ ಕಲ್ಪಿಸುವುದು ಅತ್ಯಗತ್ಯ. ಇದರಿಂದ ಶೈಕ್ಷಣಿಕ ವಾತಾವರಣವನ್ನು ಮತ್ತಷ್ಟು ಸುಧಾರಿಸಲು ಸಾಧ್ಯ ಎಂಬುದು ಪ್ರಗತಿಪರರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣಪ್ರೇಮಿಗಳ ಅಭಿಪ್ರಾಯವಾಗಿದೆ. ಕೊಪ್ಪಳ ವಿಶ್ವವಿದ್ಯಾಲಯವನ್ನು ಬಲಪಡಿಸಲು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಕಡಿಮೆ ಕಾಲೇಜುಗಳ ಪ್ರಶ್ನೆ; ಮುಚ್ಚುವಿಕೆ ಬಗ್ಗೆಯೂ ಚರ್ಚೆ?

ಕೊಪ್ಪಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪ್ರಸ್ತುತ ಬೆರಳೆಣಿಕೆಯಷ್ಟು ಕಾಲೇಜುಗಳು ಮಾತ್ರ ಬರುತ್ತಿವೆ ಎಂಬ ವಿಚಾರವೂ ಚರ್ಚೆಗೆ ಬಂದಿದೆ. ಕಡಿಮೆ ಸಂಖ್ಯೆಯ ಕಾಲೇಜುಗಳಿರುವ ಸಂದರ್ಭದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಮುಂದುವರಿಸುವುದು ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಎಷ್ಟರ ಮಟ್ಟಿಗೆ ಸಮರ್ಪಕ ಎಂಬುದನ್ನು ಸರ್ಕಾರ ಪರಿಶೀಲಿಸಬೇಕಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯ ಸ್ಥಾಪನೆಯಷ್ಟೇ ಮುಖ್ಯವಲ್ಲ; ಅದಕ್ಕೆ ಅಗತ್ಯವಿರುವ ಕಟ್ಟಡ, ಸಿಬ್ಬಂದಿ, ಶೈಕ್ಷಣಿಕ ಸೌಲಭ್ಯ ಹಾಗೂ ನಿರಂತರ ಅನುದಾನ ಒದಗಿಸುವುದು ಕೂಡ ಅಷ್ಟೇ ಮುಖ್ಯ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ರಾಜ್ಯದಲ್ಲಿ ಆರಂಭಿಸಲಾಗಿರುವ ಎಲ್ಲ ಹೊಸ ವಿಶ್ವವಿದ್ಯಾಲಯಗಳನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದಿಲ್ಲ. ಆದರೆ ಅವುಗಳ ಕಾರ್ಯನಿರ್ವಹಣೆ, ವಿದ್ಯಾರ್ಥಿಗಳ ಸಂಖ್ಯೆ, ಮೂಲಸೌಕರ್ಯ, ಸಿಬ್ಬಂದಿ ಹಾಗೂ ಸರ್ಕಾರದ ಮೇಲಿನ ಆರ್ಥಿಕ ಹೊರೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

PV NEWS ಕನ್ನಡ 24×7 | ಇದು ಪ್ರಜೆಗಳ ಪರ ಹದ್ದಿನ ಕಣ್ಣು.

Prajavikshane

Chandru R Bhanapaur

Leave a Reply

error: Content is protected !!