PV SPECIAL STORY : ಮೂರ್ತಿ ನಿಂತಿತು; ಪ್ರಶ್ನೆಗಳು ಎದ್ದವು! : ವೀರಭದ್ರಪ್ಪ ಶಿರೂರು ವೃತ್ತದ ಉದ್ಘಾಟನೆಗೆ ಸಚಿವ ಬಸವರಾಜ ರಾಯರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ್ ಗೈರು!
PV NEWS ಕನ್ನಡ 24×7 | ವಿಶೇಷ ವರದಿ :ಚಂದ್ರು ಆರ್. ಭಾನಾಪುರ.
ಆಹ್ವಾನ ಪತ್ರಿಕೆ, ಅಧಿಕಾರಿಗಳ ಅನುಪಸ್ಥಿತಿ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ
ಕುಕನೂರು, ಆ.15 : ಸ್ವಾತಂತ್ರ್ಯ ಹೋರಾಟಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕ ಶಿರೂರು ವೀರಭದ್ರಪ್ಪ ಅವರ ಮೂರ್ತಿ ಅನಾವರಣಗೊಂಡಿದೆ. ಹಲವು ವರ್ಷಗಳಿಂದ ನಿರೀಕ್ಷಿಸಲಾಗುತ್ತಿದ್ದ ಕುಕನೂರಿನ ಹೃದಯ ಭಾಗದ ವೃತ್ತಕ್ಕೆ ಅಧಿಕೃತ ರೂಪ ಸಿಕ್ಕಿದೆ. ಆದರೆ, ಗೌರವದ ಈ ಕಾರ್ಯಕ್ರಮದ ಸಂಭ್ರಮದ ನಡುವೆಯೇ ಪ್ರಮುಖ ರಾಜಕೀಯ ನಾಯಕರ ಗೈರುಹಾಜರಿ ಇದೀಗ ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೂರ್ತಿ ಅನಾವರಣ, ರಾಷ್ಟ್ರಧ್ವಜಾರೋಹಣ ಹಾಗೂ ಕೃತಿ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದರೂ, ಕ್ಷೇತ್ರದ ಹಾಲಿ ಶಾಸಕ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ವಿಶೇಷವಾಗಿ, ಸಚಿವರು ಸಂಜೆ ಕುಕನೂರಿಗೆ ಆಗಮಿಸಿದ್ದರೂ ಮೂರ್ತಿ ಅನಾವರಣಗೊಂಡ ಸ್ಥಳಕ್ಕೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸದಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಗೌರವಕ್ಕೆ ರಾಜಕೀಯದ ಗಡಿ ಏಕೆ?
ವೀರಭದ್ರಪ್ಪ ಶಿರೂರು ಅವರು ಕೇವಲ ರಾಜಕೀಯ ನಾಯಕನಲ್ಲ; ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ನಿಜಾಮ ಆಡಳಿತದ ವಿರುದ್ಧ ಹೋರಾಡಿದ ಹೋರಾಟಗಾರರಾಗಿದ್ದರು. ಯಲಬುರ್ಗಾ ಕ್ಷೇತ್ರದ ಮೊದಲ ಶಾಸಕರಾಗಿ ಸಾರ್ವಜನಿಕ ಬದುಕಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.
ಇಂತಹ ವ್ಯಕ್ತಿಯ ಸ್ಮರಣಾರ್ಥ ನಡೆಯುವ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸೌಜನ್ಯದ ಭೇಟಿ ನೀಡಿ ಗೌರವ ಸಲ್ಲಿಸಬಹುದಿತ್ತೇ ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.
ಸಚಿವರು ಬೆಳಿಗ್ಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಹಿನ್ನೆಲೆಯಲ್ಲಿ ಕುಕನೂರಿಗೆ ಆಗಮಿಸಲು ಸಾಧ್ಯವಾಗಿರಲಿಲ್ಲ ಎಂಬ ಮಾತುಗಳಿವೆ. ಆದರೆ, ಸಂಜೆ ಕುಕನೂರಿಗೆ ಬಂದ ನಂತರವೂ ಮೂರ್ತಿ ಅನಾವರಣಗೊಂಡ ಸ್ಥಳಕ್ಕೆ ತೆರಳದಿರುವುದು ಚರ್ಚೆಗೆ ಮತ್ತಷ್ಟು ಕಾರಣವಾಗಿದೆ.
ಕುಕನೂರು ಪ್ರವಾಸಿ ಮಂದಿರದಲ್ಲಿ ಸಚಿವರು ಕೆಲಕಾಲ ಇದ್ದರೂ, ಅಲ್ಲಿಂದ ಹೆಚ್ಚಿನ ದೂರವಿಲ್ಲದ ಮೂರ್ತಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸದಿರುವುದು ‘ಸಮಯದ ಕೊರತೆ’ಗಿಂತಲೂ ರಾಜಕೀಯ ಸಂದೇಶವೇನಾದರೂ ಇದೆಯೇ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಮಾಜಿ ಸಚಿವ ಹಾಲಪ್ಪ ಆಚಾರ್ ಗೈರುಹಾಜರಿಯೂ ಚರ್ಚೆಗೆ
ಇದೇ ವೇಳೆ, ಮಾಜಿ ಶಾಸಕ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಗೈರುಹಾಜರಿಯೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಲ್ಲ ಮೂಲಗಳಿಂದ PV NEWS ಕನ್ನಡ 24×7ಗೆ ಲಭಿಸಿರುವ ಮಾಹಿತಿಯ ಪ್ರಕಾರ, ಹಾಲಪ್ಪ ಆಚಾರ್ ಅವರು ಪೂರ್ವನಿಯೋಜಿತವಾಗಿ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಆದರೆ, ಅಂತಿಮವಾಗಿ ಅವರು ಕಾರ್ಯಕ್ರಮಕ್ಕೆ ಹಾಜರಾಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆದರೆ, ಅವರ ಗೈರುಹಾಜರಿಗೆ ನಿಖರ ಕಾರಣವೇನು ಎಂಬುದರ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಬೆಳಗ್ಗೆ 11:30ಕ್ಕೆ ಮಾಜಿ ಸಚಿವ ಹಾಲಪ್ಪ ಆಚಾರ್ ಬಂದು ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿದರು ಸಲ್ಲಿಸಿದರು ಎನ್ನಲಾಗಿದೆ. ಹೀಗಾಗಿ, ಈ ಕುರಿತು ಕೇಳಿಬರುತ್ತಿರುವ ಮಾತುಗಳನ್ನು ಸದ್ಯಕ್ಕೆ ರಾಜಕೀಯ ವಲಯದ ಚರ್ಚೆಗಳೆಂದೇ ಪರಿಗಣಿಸಬೇಕಾಗಿದೆ.
ಮಾಜಿ ಸಚಿವ ಹಾಲಪ್ಪ ಆಚಾರ್ ಅವರಿಂದ ಸ್ವತಂತ್ರ ಹೋರಾಟಗಾರ ಹಾಗೂ ಶಾಸಕರಾದ ದಿ. ಶಿರೂರು ವೀರಭದ್ರಪ್ಪನವರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
‘ಆಮಂತ್ರಣ ಪತ್ರಿಕೆ ಬಂದಿಲ್ಲ’ ಎಂಬ ಮಾತು!
ಕಾರ್ಯಕ್ರಮದ ಆಹ್ವಾನ ವಿಚಾರವೂ ಇದೀಗ ಚರ್ಚೆಯ ಮತ್ತೊಂದು ಕೇಂದ್ರವಾಗಿದೆ.
ಹಾಲಿ ಹಾಗೂ ಮಾಜಿ ಸಚಿವರುಗಳಿಗೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ತಲುಪಿಲ್ಲ ಅಥವಾ ತಮ್ಮನ್ನು ಅಧಿಕೃತವಾಗಿ ಆಹ್ವಾನಿಸಲಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇದರ ಜೊತೆಗೆ, ಸ್ಥಳೀಯ ತಾಲೂಕು ಮಟ್ಟದ ಕೆಲವು ಅಧಿಕಾರಿಗಳಿಗೂ ಕಾರ್ಯಕ್ರಮದ ಕುರಿತು ಸಮರ್ಪಕ ಮಾಹಿತಿ ಇರಲಿಲ್ಲ ಎಂಬ ಹೇಳಿಕೆಗಳು ಕೇಳಿಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹಲವು ವರ್ಷಗಳ ಬೇಡಿಕೆಯ ಬಳಿಕ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕ್ಷೇತ್ರದ ಮೊದಲ ಶಾಸಕರ ಮೂರ್ತಿ ಅನಾವರಣಗೊಳ್ಳುವಂತಹ ಕಾರ್ಯಕ್ರಮದಲ್ಲಿ ಆಹ್ವಾನ ಮತ್ತು ಆಡಳಿತಾತ್ಮಕ ಸಮನ್ವಯದ ಕುರಿತು ಗೊಂದಲದ ಮಾತುಗಳು ಕೇಳಿಬರುತ್ತಿರುವುದು ವಿಪರ್ಯಾಸವೇ ಸರಿ.
ಯಾರಿಗೆ ಆಹ್ವಾನ ನೀಡಲಾಗಿತ್ತು? ಯಾರಿಗೆ ಆಹ್ವಾನ ನೀಡಲಾಗಿಲ್ಲ? ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾರ್ಯಕ್ರಮದ ಮಾಹಿತಿ ಯಾವ ಹಂತದಲ್ಲಿ ನೀಡಲಾಗಿತ್ತು? ಎಂಬ ಪ್ರಶ್ನೆಗಳಿಗೆ ಆಯೋಜಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಪಷ್ಟನೆ ಇನ್ನಷ್ಟೇ ಬರಬೇಕಿದೆ.
ಅಧಿಕಾರಿಗಳ ಅನುಪಸ್ಥಿತಿಯೂ ಪ್ರಶ್ನೆಯೇ?
ಮೂರ್ತಿ ಅನಾವರಣದಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಸ್ಥಳೀಯ ಆಡಳಿತದ ಕೆಲವು ಅಧಿಕಾರಿಗಳು ಗೈರಾಗಿರುವುದೂ ಸಾರ್ವಜನಿಕರ ಗಮನ ಸೆಳೆದಿದೆ.
ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಿರದಿದ್ದರೂ, ಸ್ಥಳೀಯ ಇತಿಹಾಸಕ್ಕೆ ಸಂಬಂಧಿಸಿದ ಮಹತ್ವದ ವ್ಯಕ್ತಿಯ ಸ್ಮರಣಾರ್ಥ ನಡೆಯುವ ಕಾರ್ಯಕ್ರಮದಲ್ಲಿ ಆಡಳಿತದ ಪ್ರತಿನಿಧಿಗಳು ಸಾಂಕೇತಿಕವಾಗಿ ಭಾಗವಹಿಸಿದ್ದರೆ ಸಾರ್ವಜನಿಕವಾಗಿ ಉತ್ತಮ ಸಂದೇಶ ಹೋಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಕಾರ್ಯಕ್ರಮದ ಕುರಿತು ತಾಲೂಕು ಮಟ್ಟದ ಅಧಿಕಾರಿಗಳಿಗೇ ಸಮರ್ಪಕ ಮಾಹಿತಿ ಇರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಆಯೋಜಕರು ಮತ್ತು ಆಡಳಿತದ ನಡುವೆ ಸಮನ್ವಯದ ಕೊರತೆಯಿತ್ತೇ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.
‘ಹಳ್ಳಿಯ ಏಳಿಗೆ’ ಬರೆದವರು; ರಾಜಕೀಯದ ಏಳಿಗೆ ಎಲ್ಲಿದೆ?
ವೀರಭದ್ರಪ್ಪ ಶಿರೂರು ಅವರು ಸರಳತೆ, ಪ್ರಾಮಾಣಿಕತೆ ಹಾಗೂ ಜನಪರ ರಾಜಕಾರಣಕ್ಕೆ ಹೆಸರಾಗಿದ್ದರು. ಶಾಸಕರಾಗಿದ್ದರೂ ಸಾಮಾನ್ಯರಂತೆ ಬಸ್‌ನಲ್ಲಿ ಸಂಚರಿಸಿದವರು. ರೈತರ ಪರವಾಗಿ ಸತ್ಯಾಗ್ರಹ ನಡೆಸಿದವರು. ಪಕ್ಷಾತೀತ ಆಡಳಿತದ ಅಗತ್ಯದ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದವರು.
ಗ್ರಾಮೀಣಾಭಿವೃದ್ಧಿಯ ತಮ್ಮ ಚಿಂತನೆಗಳನ್ನು ‘ಹಳ್ಳಿಯ ಏಳಿಗೆ’ ಕೃತಿಯಲ್ಲಿ ದಾಖಲಿಸಿದ್ದ ಅವರು, ಸಾರ್ವಜನಿಕ ಬದುಕಿನಲ್ಲಿ ಜನಪರ ಮೌಲ್ಯಗಳಿಗೆ ಆದ್ಯತೆ ನೀಡಿದ್ದರು.
ಆದರೆ, ಇಂತಹ ವ್ಯಕ್ತಿಯ ಮೂರ್ತಿ ಅನಾವರಣಗೊಂಡ ದಿನವೇ ರಾಜಕೀಯ ಪ್ರಾತಿನಿಧ್ಯ, ಆಹ್ವಾನ, ಹಾಜರಿ–ಗೈರುಹಾಜರಿ ಮತ್ತು ಆಡಳಿತಾತ್ಮಕ ಸಮನ್ವಯದ ವಿಚಾರಗಳು ಚರ್ಚೆಗೆ ಬಂದಿರುವುದು ಕಾಲದ ಬದಲಾವಣೆಯ ವ್ಯಂಗ್ಯವೇ ಸರಿ.
ಮೂರ್ತಿ ನಿಂತಿತು; ಪ್ರಶ್ನೆಗಳು ಎದ್ದವು..!
ವೀರಭದ್ರಪ್ಪ ಶಿರೂರು ಅವರ ಮೂರ್ತಿ ಇಂದು ಕುಕನೂರಿನ ವೃತ್ತದಲ್ಲಿ ನಿಂತಿದೆ. ಆದರೆ, ಮೂರ್ತಿಯ ಮುಂದೆ ಯಾರು ನಿಂತರು? ಯಾರು ನಿಲ್ಲಲಿಲ್ಲ? ಎಂಬ ಪ್ರಶ್ನೆಯೇ ಇದೀಗ ರಾಜಕೀಯ ಚರ್ಚೆಯ ವಿಷಯವಾಗಿದೆ.
ವೀರಭದ್ರಪ್ಪ ಅವರ ಅಭಿಮಾನಿಗಳು ಹಾಗೂ ಪ್ರಗತಿಪರ ಚಿಂತಕರ ಪ್ರಕಾರ, ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗೆ ರಾಜಕೀಯ ಬಣ್ಣ ನೀಡಬಾರದು. ಗೌರವ ಸಲ್ಲಿಸುವುದು ಯಾವುದೇ ಒಂದು ಪಕ್ಷದ ಕಾರ್ಯಕ್ರಮವಲ್ಲ; ಅದು ಇತಿಹಾಸಕ್ಕೆ ಸಲ್ಲಿಸುವ ಗೌರವ.
ಇನ್ನೊಂದೆಡೆ, ಕಾರ್ಯಕ್ರಮದ ಆಯೋಜನೆ ಅಥವಾ ಅದರ ಹಿಂದೆ ಇರುವ ಸ್ಥಳೀಯ ರಾಜಕೀಯ ಸಮೀಕರಣಗಳ ಬಗ್ಗೆ ಕೆಲವರಿಗೆ ಅಸಮಾಧಾನವಿತ್ತೇ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಇದಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ.
ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಗೈರುಹಾಜರಿಗೆ ಸಂಬಂಧಿಸಿದಂತೆ ಅವರ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಗೌರವ ರಾಜಕೀಯಾತೀತವಾಗಲಿ…!
ವೀರಭದ್ರಪ್ಪ ಶಿರೂರು ಅವರ ಮೂರ್ತಿ ಕೇವಲ ಕಲ್ಲಿನ ಪ್ರತಿಮೆ ಆಗದೆ, ಸ್ವಾತಂತ್ರ್ಯ ಹೋರಾಟ, ಸರಳ ರಾಜಕಾರಣ ಮತ್ತು ಸಾರ್ವಜನಿಕ ಬದುಕಿನ ಮೌಲ್ಯಗಳ ಸಂಕೇತವಾಗಬೇಕೆಂಬುದು ಅಭಿಮಾನಿಗಳ ಆಶಯ.
ಮೂರ್ತಿಗೆ ಯಾರು ಮಾಲಾರ್ಪಣೆ ಮಾಡಿದರು ಎಂಬುದಕ್ಕಿಂತ, ವೀರಭದ್ರಪ್ಪ ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಯಾರು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬುದೇ ಮುಖ್ಯ.
ಇತಿಹಾಸದ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು ಎಂಬ ಸಂದೇಶವೂ ಈ ಬೆಳವಣಿಗೆಯಿಂದ ಹೊರಹೊಮ್ಮಿದೆ.
ಮೂರ್ತಿ ಅನಾವರಣಗೊಂಡಿದೆ…
ಆದರೆ ಅದರ ಮುಂದೆ ನಿಲ್ಲಬೇಕಿರುವುದು ಕೇವಲ ಜನಪ್ರತಿನಿಧಿಗಳಲ್ಲ—ವೀರಭದ್ರಪ್ಪ ಶಿರೂರು ಅವರು ಪ್ರತಿಪಾದಿಸಿದ ಮೌಲ್ಯಗಳೂ ಹೌದು.
ಮೂರ್ತಿ ನಿಂತಿದೆ…
ಆದರೆ ಅದರ ನೆರಳಲ್ಲಿ ಎದ್ದಿರುವ ರಾಜಕೀಯ ಪ್ರಶ್ನೆಗಳಿಗೆ ಉತ್ತರ ಯಾರು ನೀಡುತ್ತಾರೆ.