You are currently viewing PV NEWS : ಕುಕನೂರು | ಸ್ವಾತಂತ್ರ್ಯ ಹೋರಾಟದಿಂದ ವಿಧಾನಸಭೆಯವರೆಗೆ… ವೀರಭದ್ರಪ್ಪ ಶಿರೂರರ ಆದರ್ಶಕ್ಕೆ ಸ್ಮರಣಾಂಜಲಿ!

PV NEWS : ಕುಕನೂರು | ಸ್ವಾತಂತ್ರ್ಯ ಹೋರಾಟದಿಂದ ವಿಧಾನಸಭೆಯವರೆಗೆ… ವೀರಭದ್ರಪ್ಪ ಶಿರೂರರ ಆದರ್ಶಕ್ಕೆ ಸ್ಮರಣಾಂಜಲಿ!

PV NEWS : ಕುಕನೂರು | ಸ್ವಾತಂತ್ರ್ಯ ಹೋರಾಟದಿಂದ ವಿಧಾನಸಭೆಯವರೆಗೆ… ವೀರಭದ್ರಪ್ಪ ಶಿರೂರರ ಆದರ್ಶಕ್ಕೆ ಸ್ಮರಣಾಂಜಲಿ!

PV NEWS ಕನ್ನಡ 24×7 |

ಕುಕನೂರು, ಆ.15: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕರಾದ ಶಿರೂರು ವೀರಭದ್ರಪ್ಪ ಅವರ ತ್ಯಾಗ, ಸರಳತೆ, ಪ್ರಾಮಾಣಿಕತೆ, ತತ್ವ–ಸಿದ್ಧಾಂತ ಮತ್ತು ಜನಪರ ಕಾಳಜಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಅವರ ಪುತ್ರ ಡಾ. ಬಿ.ವಿ. ಶಿರೂರ ಹೇಳಿದರು.

ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಶನಿವಾರ ಶಿರೂರು ವೀರಭದ್ರಪ್ಪ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಮೂರ್ತಿ ಅನಾವರಣ, ರಾಷ್ಟ್ರಧ್ವಜಾರೋಹಣ ಹಾಗೂ ‘ಶಿರೂರು ವೀರಭದ್ರಪ್ಪ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರಭದ್ರಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಜನಪ್ರತಿನಿಧಿಯಾಗಿ ಹಾಗೂ ಸಮಾಜ ಸೇವಕರಾಗಿ ತಮ್ಮ ಜೀವನವನ್ನು ಜನರಿಗಾಗಿ ಮುಡಿಪಾಗಿಟ್ಟಿದ್ದರು. ಸರಳತೆ, ಪ್ರಾಮಾಣಿಕತೆ, ತತ್ವ–ಸಿದ್ಧಾಂತ ಮತ್ತು ಜನಪರ ಕಾಳಜಿ ಅವರ ಬದುಕಿನ ಪ್ರಮುಖ ಗುಣಗಳಾಗಿದ್ದವು. ಪಟ್ಟಣದ ಪ್ರಮುಖ ವೃತ್ತದಲ್ಲಿ ಅವರ ಮೂರ್ತಿ ಅನಾವರಣಗೊಂಡಿರುವುದು ಕುಟುಂಬಕ್ಕೆ ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಡಾ. ಬಿ.ವಿ. ಶಿರೂರ ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯ

ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ವೀರಭದ್ರಪ್ಪ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ರಜಾಕಾರರ ಹಾವಳಿಯ ಸಂದರ್ಭದಲ್ಲಿ ಜನರ ರಕ್ಷಣೆಗೆ ನಿಂತು ಹೋರಾಟ ನಡೆಸಿದ್ದರು. 1930ರಲ್ಲಿಯೇ ರಾಜೂರಿನಲ್ಲಿ ಹರಿಜನರಿಗಾಗಿ ಶಾಲೆ ಆರಂಭಿಸುವ ಜತೆಗೆ ಹೆಣ್ಣುಮಕ್ಕಳಿಗಾಗಿ ಕೈಗಾರಿಕಾ ತರಬೇತಿ ವ್ಯವಸ್ಥೆ ಕಲ್ಪಿಸಿದ್ದರು.

ಗ್ರಾಮಗಳ ಅಭಿವೃದ್ಧಿ ಹಾಗೂ ಜನರ ಬದುಕಿನ ಸುಧಾರಣೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ‘ಹಳ್ಳಿಗಳ ಏಳಿಗೆ’ ಕೃತಿಯನ್ನೂ ರಚಿಸಿದ್ದರು ಎಂದು ಡಾ. ಬಿ.ವಿ. ಶಿರೂರ ತಿಳಿಸಿದರು.

ನಿಜಾಮನ ಆಡಳಿತದ ಸಂದರ್ಭದಲ್ಲಿ ಕೊಪ್ಪಳದ ರೈಲ್ವೆ ಮೈದಾನದಲ್ಲಿ ಸಹಚರರೊಂದಿಗೆ ರಾಷ್ಟ್ರಧ್ವಜಾರೋಹಣ ಮಾಡಿದ್ದಕ್ಕಾಗಿ ವೀರಭದ್ರಪ್ಪ ಅವರು ಏಳು ತಿಂಗಳು ಜೈಲು ವಾಸ ಅನುಭವಿಸಿದ್ದರು. 1934–36ರ ಅವಧಿಯಲ್ಲಿ ಭಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧೀಜಿ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿ, ಸಾವಿರಾರು ಜನರಿಗೆ ಗಾಂಧೀಜಿ ಅವರ ದರ್ಶನಕ್ಕೆ ಅವಕಾಶ ಕಲ್ಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.

ಶಾಸಕರಾಗಿದ್ದರೂ ಸರಳ ಜೀವನ

1952 ಹಾಗೂ 1957ರ ಚುನಾವಣೆಗಳಲ್ಲಿ ಸೋತಿದ್ದ ವೀರಭದ್ರಪ್ಪ ಅವರು 1962 ಮತ್ತು 1967ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗಿದ್ದರೂ ಸ್ವಂತ ವಾಹನ ಬಳಸದೆ ಬಸ್‌ನಲ್ಲಿ ಸಂಚರಿಸುತ್ತಿದ್ದ ಅವರ ಸರಳ ಜೀವನ ಇಂದಿಗೂ ಮಾದರಿಯಾಗಿದೆ.

ಬರಗಾಲದ ಸಂದರ್ಭದಲ್ಲಿ ರೈತರು ಮತ್ತು ಬಡವರಿಗೆ ಧಾನ್ಯ ಒದಗಿಸುವಂತೆ ಒತ್ತಾಯಿಸಿ ಸತ್ಯಾಗ್ರಹ ನಡೆಸಿದ್ದರು. ದೇಶದ ಅಭಿವೃದ್ಧಿಗೆ ಪಕ್ಷಾತೀತ ಆಡಳಿತ ಅಗತ್ಯ ಎಂದು ವಿಧಾನಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದರು. ಶಿಕ್ಷಣ ಹಾಗೂ ಸಮಾಜ ಸುಧಾರಣೆಯ ಕ್ಷೇತ್ರದಲ್ಲಿಯೂ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಡಾ. ಬಿ.ವಿ. ಶಿರೂರ ಹೇಳಿದರು.

ಮೂರ್ತಿ ಅನಾವರಣ, ಕೃತಿ ಬಿಡುಗಡೆ

80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರ್ಯಕ್ರಮಕ್ಕೂ ಮುನ್ನ ಅಂದಪ್ಪ ಜವಳಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಶಿರೂರು ವೀರಭದ್ರಪ್ಪ ಅವರ ಜೀವನ, ಹೋರಾಟ ಮತ್ತು ಜನಪರ ಸೇವೆಯನ್ನು ಒಳಗೊಂಡ ‘ಶಿರೂರು ವೀರಭದ್ರಪ್ಪ’ ಕೃತಿಯನ್ನು ಶರಣಪ್ಪ ಅರಿಕೇರಿ ಬಿಡುಗಡೆಗೊಳಿಸಿದರು.

ವೀರಭದ್ರಪ್ಪ ಅವರ ಮೂರ್ತಿ ಅನಾವರಣವನ್ನು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕಳಕಪ್ಪ ಕಂಬಳಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಂದಪ್ಪ ಜವಳಿ, ಸಾಹಿತಿ ಕೆ.ಬಿ. ಬ್ಯಾಳಿ, ರಶೀದ್ ಹಣಜಗೇರಿ ಹಾಗೂ ವೀರಭದ್ರಪ್ಪ ಅವರ ಆತ್ಮೀಯ ಒಡನಾಡಿ ಈಶಪ್ಪ ಹಂಚಿನಾಳ ಸೇರಿದಂತೆ ಗಣ್ಯರು ಮಾತನಾಡಿ, ಅವರ ಸ್ವಾತಂತ್ರ್ಯ ಹೋರಾಟ, ಜನಪರ ಸೇವೆ, ಸರಳ ಜೀವನ ಹಾಗೂ ಜನರೊಂದಿಗೆ ಹೊಂದಿದ್ದ ಆತ್ಮೀಯ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದರು.

ವೀರಭದ್ರಪ್ಪ ಅವರ ನಿಸ್ವಾರ್ಥ ಸೇವೆ, ತತ್ವ–ಸಿದ್ಧಾಂತ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವೀರಭದ್ರಪ್ಪ ಅವರ ಕುಟುಂಬಸ್ಥರಾದ ದೇವಪ್ಪ ಶಿರೂರು, ಐಎಫ್‌ಎಸ್ ಅಧಿಕಾರಿ ಮಹೇಶ್ ಶಿರೂರು, ದೇವಪ್ಪ ಸೊಬನದ, ಭರಮಪ್ಪ ತಳವಾರ, ಕೆ.ಆರ್. ಕುಲಕರ್ಣಿ, ರಾಮಾನಂದ ರಾಜೂರ, ಶರಣಪ್ಪ ಕೊಪ್ಪದ, ಐ.ಎಸ್. ಗಿರೆಡ್ಡಿ, ಚನ್ನಬಸಪ್ಪ ತಳವಾರ, ಶರಣಪ್ಪ ಹೊಸಮನಿ, ಯಮನೂರಪ್ಪ ಗೊರ್ಲೆಕೊಪ್ಪ, ಸಿದ್ದಯ್ಯ ಕಳ್ಳಿಮಠ, ಸಿದ್ದಯ್ಯ ಉಳ್ಳಾಗಡ್ಡಿ ಸೇರಿದಂತೆ ವಾಕಿಂಗ್ ಗೆಳೆಯರ ಬಳಗದ ಸದಸ್ಯರು, ಅಭಿಮಾನಿಗಳು, ವಿದ್ಯಾರ್ಥಿಗಳು, ಮಹಿಳೆಯರು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

— PV NEWS ಕನ್ನಡ 24×7 | ಕುಕನೂರು

Prajavikshane

Chandru R Bhanapaur

Leave a Reply

error: Content is protected !!