ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಅಂಗಿಕಾರವಾಗಿದ್ದು, ಇಂದು ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಅವರು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಲೋಕಸಭೆಯ ಸ್ವೀಕರ್ ಓಂ ಬಿರ್ಲಾ ಅಂಗೀಕರಿಸಿದ್ದಾರೆ.
ಸಂಸದಿಯ ನಿಯಮಗಳ ಅಡಿಯಲ್ಲಿ ಅವಿಶ್ವಾಸ ನಿರ್ಣಯಕ್ಕೆ 50ಕ್ಕೂ ಹೆಚ್ಚು ಸಂಸದರ ಬೆಂಬಲ ಬೇಕು. ಸಂಸದರ ಸಂಖ್ಯೆಯನ್ನು ಎಣಿಕೆ ಮಾಡಿದ ನಂತರ ಬಿರ್ಲಾ ಅಂಗೀಕಾರ ನೀಡಿದ್ದು, ‘ಚರ್ಚೆಯ ಸಮಯವನ್ನು ನಿಗದಿಪಡಿಸಿ ಸದನಕ್ಕೆ ತಿಳಿಸಲಾಗುವುದು ಎಂದು ಸ್ವೀಕರ್ ಹೇಳಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಸಂಸತ್‌ನಲ್ಲಿ ಸದನ ಆರಂಭವಾಗುತ್ತಿದ್ದಂತೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಂಸದ ಗೊಗೊಯ್ ಅವರಿಂದ ನೋಟಿಸ್ ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ, ನಿರ್ಣಯದ ಅಂಗೀಕಾರವನ್ನು ಬೆಂಬಲಿಸುವ ಸದಸ್ಯರನ್ನು ಎದ್ದು ನಿಲ್ಲುವಂತೆ ಸ್ವೀಕರ್ ಬಿರ್ಲಾ ಕೋರಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸೇರಿದಂತೆ “ಇಂಡಿಯಾ” ಮೈತ್ರಿಕೂಟದ ಸದಸ್ಯರು ತಲೆ ಎಣಿಕೆಗಾಗಿ ಎದ್ದುನಿಂತರು. ಸಂಸದರ ಸಂಖ್ಯೆಯನ್ನು ಎಣಿಕೆ ಮಾಡಿದ ಸ್ಪೀಕರ್ ಓಂ ಬಿರ್ಲಾ ನಿರ್ಣಯವನ್ನು ಒಪ್ಪಿಕೊಂಡರು ಎಂದು ತಿಳಿದು ಬಂದಿದೆ.