ಬೆಂಗಳೂರು : ಸರ್ಕಾರದಿಂದ ಈಗಾಗಲೇ ಮಹಿಳೆಯರಿಗೆ “ಶಕ್ತಿ ಯೋಜನೆ” ಅಡಿಯಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಈ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅದೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ಸುಗಳಲ್ಲಿ ‘ಪ್ಯಾನಿಕ್ ಬಟನ್’ ಹಾಗೂ ‘ವಾಹನದ ಟ್ರ್ಯಾಕಿಂಗ್ ವ್ಯವಸ್ಥೆ’ ಅಳವಡಿಸೋದಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಿನ್ನೆ (ಗುರುವಾರ) ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ KSRTC ಬಸ್ಸುಗಳ ಸಂಚಾರ ನಿಗಾ ವ್ಯವಸ್ಥೆ ಹಾಗೂ ಪ್ಯಾನಿಕ್ ಬಟನ್ ವ್ಯವಸ್ಥೆಯೊಂದಿಗೆ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸುವುದಕ್ಕಾಗಿ 30.74 ಕೋಟಿ ರೂಪಾಯಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ.
ಈ ಯೋಜನೆ ಜಾರಿಯಿಂದ ಸಾರಿಗೆ ಬಸ್ಸುಗಳ ನೈಜ ಸಮಯದಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಸುಧಾರಿತ ನಿರ್ವಹಣಾ ಮಾಹಿತಿ ವ್ಯವಸ್ಥೆ, ಬಸ್‌ಗಾಗಿ ಕಾಯುವ ಅನಿಶ್ಚಿತತೆ ಕೂಡ ಕಡಿಮೆಯಾಗಲಿದೆ. ಬಸ್ ಪ್ರಯಾಣದ ಸಮವೂ ಕಡಿಮೆಯಾಗಲಿದ್ದು, ರಾಜ್ಯದ ಜನತೆಗೆ ಸಾರಿಗೆ ಬಸ್ಸುಗಳ ಮೇಲೆ ಮತ್ತಷ್ಟು ವಿಶ್ವಾಸಾರ್ಹತೆ ಉಂಟಾಗಲಿದೆ. ಅಪಘಾತ ಮತ್ತು ಅವಘಡಗಳನ್ನು ತಡೆಯಲು ಸಾಧ್ಯವಾಗಲಿದೆ.
“ಶಕ್ತಿ ಯೋಜನೆ”ಯಡಿಯಲ್ಲಿ ಉಚಿತವಾಗಿ ಸಾರಿಗೆ ಬಸ್ಸುಗಳಲ್ಲಿ ಸಂಚರಿಸುವ ಮಹಿಳೆಯರು, ತುರ್ತು ಸಂದರ್ಭದಲ್ಲಿ ಇವುಗಳನ್ನು ಬಳಕೆ ಮಾಡಬಹುದಾಗಿದೆ. ಆ ಮೂಲಕ ಮಹಿಳೆಯರು, ಸಾರ್ವಜನಿಕರ ಸುರಕ್ಷತೆಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನುಇಟ್ಟಿದೆ.